ಪೊನ್ನಂಪೇಟೆ, ಮಾ. ೨೯: ಅಖಿಲ ಅಮ್ಮಕೊಡವ ಸಮಾಜ ಮತ್ತು ಬಾನಂಡ ಕುಟುಂಬಸ್ಥರ ಸಹಯೋಗದಲ್ಲಿ ಮೇ ೧ ರಿಂದ ಮೇ ೩ ರವರೆಗೆ ಮೂರು ದಿನಗಳ ಕಾಲ ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಗೋಣಿಕೊಪ್ಪಲಿನ ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಬಾನಂಡ ಕುಟುಂಬದ ಅಧ್ಯಕ್ಷ ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಅವರು ಮಾತನಾಡಿ, ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ೧೧ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆಯನ್ನು ನಡೆಸಲಾಗುತ್ತಿದ್ದು, ಬಾನಂಡ ಕುಟುಂಬ ೨ನೇ ಬಾರಿ ಪಂದ್ಯಾವಳಿ ಆಯೋಜಿಸುತ್ತಿದೆ. ಈ ಬಾರಿ ಸುಮಾರು ೨೭ ತಂಡಗಳು ಅಮ್ಮಕೊಡವ ಕ್ರಿಕೆಟ್ ನಮ್ಮೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಸರ್ಕಾರದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಬಾನಂಡ ಕ್ರಿಕೆಟ್ ನಮ್ಮೆಗೆ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ ೨೦ ಕೊನೆಯ ದಿನವಾಗಿದ್ದು, ಅಮ್ಮಕೊಡವ ತಂಡಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ನಮ್ಮೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭ ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷ ಬಾನಂಡ ಎ. ಸುನೀತ್, ಪ್ರಮುಖರಾದ ಬಾನಂಡ ಆರ್. ಪ್ರಕಾಶ್, ಬಾನಂಡ ಕೃಷಿರಾಜ್, ಬಾನಂಡ ಸುದನ್, ಬಾನಂಡ ರಘು ಸುಬ್ಬಮಯ್ಯ ಇನ್ನಿತರರು ಇದ್ದರು.