ಕಣಿವೆ, ಮಾ. ೨೯: ಭಾರತವು ವಿಶ್ವದ ಅತ್ಯುನ್ನತ ನಾಗರಿಕತೆಯನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ ಗುರುಕುಲ ಮತ್ತು ಆಶ್ರಮಗಳು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದವು. ತದನಂತರ ನಳಂದ ಮತ್ತು ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಭಾರತೀಯ ಸಮಾಜದ ಮೌಲ್ಯಗಳನ್ನು, ಬದುಕಿನ ಪಾಠಗಳನ್ನು, ಸಂಸ್ಕಾರಯುತ ವಿದ್ಯಾಭ್ಯಾಸವನ್ನು ಉನ್ನತ ಶಿಕ್ಷಣದ ಮೂಲಕ ಬೋಧಿಸುತ್ತಿದ್ದವು. ಭಾರತದ ಇಂತಹ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಮಕ್ಕಳಿಗೆ ಅತ್ಯಗತ್ಯ ಮತ್ತು ಅನಿವಾರ್ಯ ಎಂದು ಬೆಂಗಳೂರು ದಕ್ಷಿಣದ ಆಡಳಿತಾತ್ಮಕ ನ್ಯಾಯಾಧೀಶ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ. ಎಸ್. ಇಂದಿರೇಶ್ ಅಭಿಮತ ವ್ಯಕ್ತಪಡಿಸಿದರು.
ಕೊಡಗು ವಿಶ್ವವಿದ್ಯಾಲಯದ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ನಾವು ಎಷ್ಟೇ ಮುಂದುವರೆದಿದ್ದರೂ ನಮ್ಮ ಪೂರ್ವಜರ ಜ್ಞಾನದಿಂದ ನಾವು ತುಂಬ ದೂರ ಉಳಿದಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ರಾಜಕೀಯ ಒಳಗೊಂಡAತೆ ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಪೂರ್ವಜರು ಆಳವಾದ ಜ್ಞಾನ ಹೊಂದಿದ್ದರು. ವೈದಿಕ ಶಿಕ್ಷಣವು ಕೇವಲ ಧರ್ಮಾಧಾರಿತ ಅಲ್ಲ, ಅಲ್ಲಿ ಕೌಶಲ್ಯದ ಬೆಳವಣಿಗೆ, ತತ್ವಾದರ್ಶಗಳನ್ನು, ವೈಚಾರಿಕತೆಯ ವಿಸ್ತಾರಕ್ಕೆ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.
ನಮ್ಮ ಋಷಿಮುನಿಗಳು ಮಕ್ಕಳಲ್ಲಿ ಆಲೋಚನಪರತೆ, ಪ್ರತಿಫಲಿತ ಚಿಂತನೆಯನ್ನು ರೂಢಿಸಬೇಕೆಂದು ಬಯಸಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಈ ಆಲೋಚನಾ ಶಕ್ತಿ ಅವರವರು ಬೆಳೆದು ಬಂದ ಪರಿಸರದಿಂದ ಪ್ರಭಾವಿತವಾಗಿರುತ್ತದೆ. ಈ ಕಾಲದ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿ ಆಲೋಚನಾ ಶಕ್ತಿ ಕುಂಠಿತವಾಗುತ್ತಿದೆ. ದೇಶದ ಇತಿಹಾಸ ಮತ್ತು ಭೌಗೋಳಿಕ ಜ್ಞಾನ ಅವರಲ್ಲಿ ಇಲ್ಲ. ಇದನ್ನು ಪಾಲಕರು, ಪೋಷಕರು ಮತ್ತು ಶಿಕ್ಷಕರು ಗಮನಿಸಬೇಕು. ಬುನಾದಿ ಗಟ್ಟಿ ಇದ್ದರೆ ಮಾತ್ರ ಕಟ್ಟಡ ಬಹುಕಾಲ ಬಾಳಿಕೆ ಬರುತ್ತದೆ. ಅದೇ ರೀತಿ ಮನೆಯಲ್ಲಿ ಶಿಕ್ಷಣ, ಸಂಸ್ಕಾರ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಭದ್ರವಾಗುತ್ತದೆ ಎಂದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ಎಚ್. ಜಂಗಮಶೆಟ್ಟಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ಸಿಗಬೇಕೆಂಬ ಬೃಹತ್ ಆಶಯದೊಂದಿಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಆರಂಭವಾಗಿದ್ದು, ಈ ಹಾದಿಯಲ್ಲಿ ಕೊಡಗು ವಿಶ್ವವಿದ್ಯಾಲಯ ಮೂರು ವರ್ಷದಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದೆ. ಅಲ್ಲದೇ ಇಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಡಗು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.
ಡಿಜಿಟಲ್ ಯುಗದಲ್ಲಿ ವರ್ತಮಾನಕ್ಕೆ ತಕ್ಕಂತೆ ಶಿಕ್ಷಕರು ಪ್ರತಿಕ್ಷಣವೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಕಾಲದಲ್ಲಿರುವ ಇಂದಿನ ವಿದ್ಯಾರ್ಥಿಗಳು ಎಷ್ಟೇ ಮಾಹಿತಿ ಹೊಂದಿದ್ದರೂ ಕೂಡ ಅವರಿಗೆ ಜ್ಞಾನದ ಕೊರತೆ ನೀಗಿಸಲು ಶಿಕ್ಷಕರು ಮತ್ತು ತರಗತಿಯ ಅವಶ್ಯಕತೆ ಇದೆ ಎಂಬುದನ್ನು ಶಿಕ್ಷಕರು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ವಿಶ್ವವಿದ್ಯಾಲಯದ ಮೂರನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮೂರು ವರ್ಷಗಳ ಅವಧಿಯಲ್ಲಿ ಕೊಡಗು ವಿಶ್ವವಿದ್ಯಾಲಯವು ನಡೆದು ಬಂದ ಹಾದಿಯನ್ನು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ಉನ್ನತ ಶಿಕ್ಷಣವು ಜನರ ಮನೆಬಾಗಿಲಿಗೆ ತಲುಪಲು, ಉನ್ನತ ಶಿಕ್ಷಣದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಕೊಡಗಿನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆAಬ ಮಹತ್ತರ ಆಶಯದೊಂದಿಗೆ ಕೊಡಗು ವಿಶ್ವವಿದ್ಯಾಲಯವು ಕಾರ್ಯನಿರತವಾಗಿದೆ ಎಂದರು.
ಕೊಡಗು ಜಿಲ್ಲೆಯು ರಾಜ್ಯದ ಬೇರೆಯ ಜಿಲ್ಲೆಗಳಿಗಿಂತ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದು, ದೂರದ ವಿಶ್ವವಿದ್ಯಾಲಯಗಳಿಗೆ ತೆರಳಲು ಸಾಧ್ಯವಾಗದೆ ಉನ್ನತ ಶಿಕ್ಷಣ ಸಿಗದೆ ಅವಕಾಶ ವಂಚಿತರಾದ ಇಲ್ಲಿನ ಆದಿವಾಸಿ, ಹಿಂದುಳಿದ, ಗಿರಿಜನ, ಬುಡಕಟ್ಟು ಮತ್ತು ಎಲ್ಲ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ ತಲುಪಿಸಲು ಈ ಜಿಲ್ಲೆಗೆ ವಿಶ್ವವಿದ್ಯಾಲಯದ ಅವಶ್ಯಕತೆ ತುರ್ತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಮನ ಕೆ.ಆರ್. ಅವರ ‘ದಿ ಟೋನ್ ಆಫ್ ಸೈಲೆನ್ಸ್’ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಕೊಡಗು ವಿಶ್ವವಿದ್ಯಾಲಯದ ಘಟಕ, ಸರ್ಕಾರಿ, ವಿವಿಧ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಗೌರವ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಡಾ. ಸುರೇಶ್ ಎಂ. ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಮತ್ತು ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿದರು. ಕೊಡಗು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ವಿಶೇಷ ಅಧಿಕಾರಿ ಪ್ರೊ. ರವಿಶಂಕರ್ ಎಂ. ಎನ್. ವಂದಿಸಿದರು.