ಮಡಿಕೇರಿ, ಮಾ. ೨೯: ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶ ಈಗಲೂ ಪಾಲನೆಗೆ ಪ್ರಸ್ತುತವಾಗಿದೆ ಎಂದು ಬೆಂಗಳೂರು ಹಲಸೂರುವಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಬೋಧ ಸ್ವರೂಪಾನಂದ ಮಹಾರಾಜ್ ಹೇಳಿದರು.

ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲಕನಾಗಿದ್ದಾಗಿನಿಂದ ಅಯೋಧ್ಯೆಯ ರಾಜ್ಯಭಾರದ ಸನ್ನಿವೇಶದವರೆಗೂ ಆತನ ಗುಣ, ನಡತೆ, ಧರ್ಮಪಾಲನೆ ಸಧೃಢವಾಗಿದ್ದು, ಸರ್ವರಿಗೂ ಅನುಕರಣೀಯವಾಗಿದೆ. ಪಿತೃವಾಕ್ಯ ಪರಿಪಾಲನೆಗೋಸ್ಕರ ರಾಜ ಸಿಂಹಾಸನವನ್ನೇ ತ್ಯಜಿಸಿ ವನವಾಸಕ್ಕೆ ತೆರಳಿದ. ರಾಮ ತನ್ನನ್ನು ಕಾಡಿಗಟ್ಟಲು ಕಾರಣಳಾದ ಮಲತಾಯಿಯನ್ನೂ ದೂಷಿಸಲಿಲ್ಲ. ತಮ್ಮ ಭರತ ಕಾಡಿಗೆ ಬಂದು ರಾಜ್ಯಭಾರ ಮಾಡುವಂತೆ ವಿನಂತಿಸಿದಾಗ ಅದನ್ನು ನಿರಾಕರಿಸಿ ಭರತನೇ ರಾಜ್ಯವಾಳುವಂತೆ ಒಪ್ಪಿಸಿದ. ಅಣ್ಣನ ಈ ಪರಿಯ ಔದಾರ್ಯ ಮನೋಭಾವಕ್ಕೆ ಮನಸೋತು ಭರತ ಆತನ ಪಾದುಕೆಯನ್ನೇ ಪಡೆದು ಸಿಂಹಾಸನದಲ್ಲಿಟ್ಟು ಕೆಲಕಾಲ ರಾಜ್ಯವಾಳಿದ. ತಮ್ಮ ಲಕ್ಷö್ಮಣ ,ಪತ್ನಿ ಸೀತೆ ರಾಮನನ್ನು ಬಿಟ್ಟಿರಲಾರದೆ ವನವಾಸಕ್ಕೆ ಹಿಂಬಾಲಿಸಿದಾಗ ಅವರ ಪ್ರೀತಿಗೆ ಮಣಿದು ಸಮ್ಮತಿಸಿದ. ಶತ್ರುಗಳಾದ ಮಾರೀಚ, ರಾವಣ, ಕುಂಭ ಕರ್ಣ ಮೊದಲಾದವರ ಮೇಲೂ ಪ್ರಾರಂಭದಲ್ಲಿ ಅವರ ತಪ್ಪನ್ನು ತಿದ್ದಿಕೊಳ್ಳಲು ಸಾಕಷ್ಟು ಅವಕಾಶ ನೀಡಿದ. ಅವರು ಅದನ್ನು ನಿರ್ಲಕ್ಷಿಸಿ ಅಧರ್ಮದಲ್ಲಿಯೇ ಮುಂದುವರಿದಾಗ ಮಾತ್ರ ಸಂಹರಿಸಿದ. ಇದರಿಂದಾಗಿ ರಾಮ ಸ್ಥಿತಪ್ರಜ್ಞ ಎನಿಸಿಕೊಂಡ ಎಂದು ಸ್ವಾಮೀಜಿ ಹೇಳಿದರು.

ಅನ್ಯಾಯದ ಹಾದಿಯಲ್ಲಿದ್ದ ವಾಲಿಯನ್ನು ಕೊಂದಾಗ ತನ್ನ ಪಾಪಕರ್ಮಗಳಿಗೆ ಪ್ರಾಯಶ್ಚಿತ್ತವಾಯಿತು ಎಂದು ಅರಿತ ವಾಲಿ ತಾನು ಪ್ರಾಣಬಿಡುವ ಮುನ್ನ ತನ್ನ ಮಗ ಅಂಗದನನ್ನು ರಾಮನಿಗೊಪ್ಪಿಸಿ ಅವನನ್ನು ನೀನೇ ರಕ್ಷಿಸು ಎಂದು ಕೋರಿದುದು ಶತ್ರುತ್ವರಹಿತ ರಾಮನ ಗುಣಕ್ಕೆ ಸಾಕ್ಷಿಯಾಗಿದೆ. ರಾಮರಾಜ್ಯದಲ್ಲಿ ತಾನು ರಾಜ ಎನ್ನುವ ದರ್ಪವಿಲ್ಲದೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಸಮಸ್ಯೆಗಳನ್ನೂ ಆಲಿಸಿ ಪರಿಹಾರ ಕಲ್ಪಿಸುವ ಉದಾರ ಗುಣಶಾಲಿಯಾಗಿದ್ದ. ತನ್ನ ತಂದೆ ಬಹು ಪತ್ನಿತ್ವ ಹೊಂದಿದ್ದರೂ ಅದಕ್ಕೆ ಆಕ್ಷೇಪಿಸದೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತಂದೆ-ತಾಯಿಯರನ್ನು ಗೌರವಿಸುತ್ತಿದ್ದ ರಾಮ ತಾನು ಮಾತ್ರ ಏಕಪತ್ನಿವ್ರತಸ್ಥನಾಗಿ ಆದರ್ಶ ಮೆರೆದ. ಹೀಗೆ ರಾಮ ತನ್ನ ದೈಹಿಕ ಸೌಂದರ್ಯದ ಆಕರ್ಷಣೆಯೊಂದಿಗೆ ಸೌಮ್ಯ ಸ್ವಭಾವ, ಸನ್ನಡತೆ ಮೂಲಕವೂ ಅಗಣಿತಗುಣಗಳ ಸತ್ಪುರುಷನಾಗಿ ಸರ್ವರ ಹಿತೈಷಿಯಾಗಿದ್ದ. ಹಾಗೆಂದು ಅನ್ಯಾಯ-ಅಧರ್ಮದ ವಿರುದ್ಧ ರಾಜಿಯಾಗದೆ ತನ್ನ ಶೌರ್ಯ-ಸ್ಥೆöÊರ್ಯಗಳ ಮೂಲಕ ಅಧರ್ಮಿಗಳನ್ನು ಸದೆಬಡಿದು ಧರ್ಮ ರಕ್ಷಣೆಯಿಂದ ಪ್ರಜಾಪಾಲಕನಾಗಿಯೂ ಪ್ರಸಿದ್ದಿ ಹೊಂದಿದ್ದು ಇಂದಿಗೂ, ಎಂದೆAದಿಗೂ ರಾಮ ಸ್ಮರಣೀಯನಾಗಿದ್ದಾನೆ ಎಂದು ಬೋಧಸ್ವರೂಪಾನಂದ ಮಹಾರಾಜ್ ನುಡಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಪರಹಿತಾನಂದ ಮಹಾರಾಜ್ ಅವರು ಮಾತನಾಡಿ, ನಮ್ಮ ಹೃದಯದಲ್ಲಿ ಭಗವಂತ ಇರಲಿ. ದೇವರಲ್ಲಿ ನಂಬಿಕೆ ಇರಲಿ. ಅಪಾರವಾದ ಶ್ರದ್ಧೆಯನ್ನಿಟ್ಟುಕೊಳ್ಳಬೇಕು. ರಾಮ ನಾಮ ಮುಕ್ತಿಗೆ ದಾರಿ ಎಂದರು.

ವೇದಿಕೆಯಲ್ಲಿ ಸೋಮನಾಥನಂದಪುರಿ ಸ್ವಾಮೀಜಿ, ರಾಮೋತ್ಸವ ಸಮಿತಿ ಪರವಾಗಿ ಜಿ. ರಾಜೇಂದ್ರ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಕೆ.ಎಂ. ಗಣೇಶ್, ನಂಜುAಡ, ಗೋಪಿನಾಥ್, ತಿಮ್ಮಯ್ಯ, ಪರಮೇಶ್, ವಿನೋದ್ ಕುಮಾರ್ ಹಾಗೂ ಮಂಜುನಾಥ್ ಇವರುಗಳು ಅತಿಥಿಗಳಿಗೆ ಹಾರಾರ್ಪಣೆ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿದರು.