ಕಣಿವೆ, ಮಾ. ೨೫: ಕೊಡಗು ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾದ ಹಾರಂಗಿ ನದಿ ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಜನವಸತಿಯ ಕಸ ಹಾಗೂ ತ್ಯಾಜ್ಯಕ್ಕೆ ಸಿಲುಕಿ ನಲುಗಿದೆ. ಈ ಹಾರಂಗಿ ನದಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿಯ ಅನತಿ ದೂರದಲ್ಲಿ ಕಸ ತ್ಯಾಜ್ಯದೊಳಗೆ ಮುಳುಗಿ ಹೋಗಿದ್ದು ಗಬ್ಬೆದ್ದು ನಾರುತ್ತಿದೆ.

ಕಸದಿಂದ ತುಂಬಿ ಹೋದ ನದಿಯ ದಾರಿ

ಕೂಡುಮಂಗಳೂರು ಗ್ರಾಪಂ ಎದುರಿನ ನದಿಗೆ ಸೇರುವ ರಸ್ತೆಯ ಹಾರಂಗಿ ನದಿ ತೀರದಲ್ಲಿ ಇಡೀ ಊರಿನ ಕಸ ತ್ಯಾಜ್ಯಗಳನ್ನು ರಾಶಿಗಟ್ಟಲೆ ತಂದು ಸುರಿದು ಇಡೀ ನದಿಯ ಪರಿಸರವನ್ನು ಕಲುಷಿತಗೊಳಿಸಿದ್ದರೂ ಕೂಡ ಗ್ರಾಪಂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವೇ...?, ಅಥವಾ ಗೊತ್ತಿದ್ದೂ ಕೂಡ ಪಂಚಾಯಿತಿ ಕುರುಡಾಗಿದೆಯೇ ಎಂದು ಸ್ಥಳೀಯರು ಆಕ್ರೋಶÀ ವ್ಯಕ್ತಪಡಿಸಿದ್ದಾರೆ.

ಹಿಂದೂ ರುದ್ರಭೂಮಿಯ ದಾರಿಯಲ್ಲೂ ಕಸದ ರಾಶಿ

ಮನುಷ್ಯ ಜೀವಂತ ಇದ್ದಾಗ ತಾನುಡುವ ಬಟ್ಟೆ, ಉಣ್ಣುವ ಆಹಾರ ಶುಚಿ ಹಾಗೂ ರುಚಿಯಾಗಿರಬೇಕೆಂದು ಬಯಸುವುದು ಸಹಜ. ಆದರೆ, ಕಾಲನ ಕರೆಗೆ ಓಗೊಟ್ಟು ಹೋಗುವಾಗ ಒಳ್ಳೆಯ ಪರಿಸರದಲ್ಲಿ ಹೋಗುವುದಕ್ಕೂ ಅವಕಾಶ ಇಲ್ಲವೇ ಎಂಬುದು ಇಲ್ಲಿನ ಹಿರಿಯ ನಿವಾಸಿಯೊಬ್ಬರ ಆವೇಶಭರಿತ ಪ್ರಶ್ನೆ. ಜನರು ಕಟ್ಟುವ ತೆರಿಗೆಯ ಹಣದಲ್ಲಿ ಅಧಿಕಾರ ನಡೆಸುವ ಅಧಿಕಾರಿಗಳು ಜನರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸುವಾಗ ಈ ರೀತಿ ತಾತ್ಸಾರ ಏಕೆ ಮಾಡುವರು ? ಎಲ್ಲ ಸೌಲಭ್ಯಗಳನ್ನೂ ನಾವು ಕೇಳಿಯೇ ಪಡೆಯಬೇಕೇ ? ಜನರು ಕೇಳದೆಯೇ ಅಧಿಕಾರಿಗಳು ತಾವು ಖುದ್ದಾಗಿ ನೋಡಿ ಮಾಡುವ ಯೋಜನೆಗಳು ಅಥವಾ ಸೌಲಭ್ಯ ಗಳು ನಮಗೆ ಮರೀಚಿಕೆಯೇ ? ಎಂದು ಹೆಸರು ಹೇಳಲಿಚ್ಛಿಸದ ಕೂಡುಮಂಗಳೂರು ಹಿರಿಯ ನಿವಾಸಿಯೊಬ್ಬರು ಆಡಳಿತಾರೂಢರಿಗೆ ಪ್ರಶ್ನೆ ಮಾಡಿದ್ದಾರೆ.

ಆದ್ದರಿಂದ ಕೂಡಲೇ ಕೂಡುಮಂಗಳೂರು ಗ್ರಾಪಂ ಅಧಿಕಾರಿಗಳು ಕೂಡುಮಂಗಳೂರು ಬಳಿಯ ಹಾರಂಗಿ ನದಿಯ ಪರಿಸರವನ್ನು ಸ್ವಚ್ಛ ಮಾಡುವ ಮೂಲಕ ನಾಗರೀಕರ ಸಮಸ್ಯೆಗೆ ಪರಿಹಾರ ನೀಡುವರಾ ? ಕಾದು ನೋಡಬೇಕಿದೆ. ಕೆ.ಎಸ್ ಮೂರ್ತಿ