ಮಡಿಕೇರಿ, ಮಾ. ೨೫: ಯು.ಎಸ್-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಅಲಿ ಅಮೀನಿ ಹತ್ಯೆಯಾದ ಬಳಿಕ ಪ್ರತೀಕಾರವಾಗಿ ಇರಾನ್ ನಡೆಸುತ್ತಿರುವ ದಾಳಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಒಂದು ತಿಂಗಳಾಗುತ್ತಾ ಬಂದರೂ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಮೇರಿಕಾ ಅಧ್ಯಕ್ಷ ೫ ದಿನಗಳ ಕಾಲ ಇರಾನ್ ಮೇಲೆ ದಾಳಿ ನಡೆಸದಿರಲು ತೀರ್ಮಾನಿಸಿದ್ದರೂ, ಅಮೇರಿಕಾದ ಮಿತ್ರ ರಾಷ್ಟç ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ಮುಂದುವರಿಸಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್, ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಇದು ಮಾತ್ರವಲ್ಲದೆ ಮಧ್ಯಪ್ರಾಚ್ಯ ರಾಷ್ಟçಗಳಲ್ಲಿನ ಯು.ಎಸ್ ಮಿಲಿಟರಿ ಕೇಂದ್ರಗಳ ಮೇಲೂ ಇರಾನ್ ದಾಳಿ ನಡೆಸಿದ್ದು, ಕೆಲ ಅನಿಲ ಉತ್ಪಾದನೆ, ತೈಲ ಪರಿಷ್ಕರಣೆ ಘಟಕಗಳ ಮೇಲೂ ದಾಳಿ ನಡೆಸಿದೆ. ಈ ರಾಷ್ಟçಗಳಿಂದಲೇ ಭಾರತ ಸೇರಿದಂತೆ ಪೂರ್ವದಲ್ಲಿನ ಇತರ ಹಲವು ರಾಷ್ಟçಗಳಿಗೆ ಅನಿಲ ಹಾಗೂ ತೈಲ ಸರಬರಾಜು ಆಗುವುದರಿಂದ ಸದ್ಯದ ಯುದ್ಧ ಸ್ಥಿತಿಯಲ್ಲಿ ಅನಿಲ ಕೊರತೆ ಎದುರಾಗಿದೆ. ಈಗಾಗಲೇ ಉತ್ಪಾದನೆಗೊಂಡಿರುವ ಅನಿಲ ಸರಬರಾಜಿಗೂ, ಹೋರ್ಮುಜ್ ಜಲಸಂಧಿಯನ್ನು ಇರಾನ್ ತಡೆದಿರುವ ಕಾರಣ ತೊಂದರೆ ಉಂಟಾಗಿದೆ. ಭಾರತದ ಕೆಲ ಹಡಗುಗಳು ಈ ಜಲಸಂಧಿಗಳ ಮೂಲಕ ತಾಯ್ನಾಡು ಸೇರಿದ್ದರು ಕೂಡ ಅಗತ್ಯ ಪ್ರಮಾಣದಲ್ಲಿ ಈ ಹಿಂದಿನAತೆಯೇ ಅನಿಲ ಸರಬರಾಜು ಮತ್ತೇ ಪುನರಾರಂಭವಾಗುವುದು ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಇಲ್ಲದಂತಾಗಿದೆ. ಪರಿಣಾಮ ಕೊಡಗು ಜಿಲ್ಲೆಯಲ್ಲಿಯೂ ಕೂಡ ಸಣ್ಣ ಹೊಟೇಲ್ ಉದ್ಯಮಿಗಳು ಕಂಗಾಲಾಗಿದ್ದು ಕೆಲವರು ಸೌದೆ ಒಲೆಯಲ್ಲಿ ಅಡುಗೆ ತಯಾರಿಸುತ್ತಿದ್ದರೆ ಇನ್ನು ಕೆಲ ಹೊಟೇಲ್, ಬೇಕರಿ ಮಳಿಗೆಗಳನ್ನು ಮಾಲೀಕರು ಮುಚ್ಚಿದ್ದಾರೆ.ಕೂಡಿಗೆ, ಮಾ. ೨೫: ಅಡುಗೆ ಅನಿಲದ ಕೊರತೆಯಿಂದಾಗಿ ಕೂಡಿಗೆ- ಕೂಡುಮಂಗಳೂರು ಮುಖ್ಯ ರಸ್ತೆಯ ಹಲವು ಹೋಟೆಲ್‌ಗಳು ಬಂದ್ ಆಗಿವೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾಗಿರುವ ಹಾರಂಗಿ ಮತ್ತು ಕಾವೇರಿ ನಿಸರ್ಗಧಾಮದ ವೀಕ್ಷಣೆಗೆ ಬರುವ ಪ್ರವಾಸರು ಹೆಚ್ಚಾಗಿ ಕೂಡಿಗೆ - ಕೂಡುಮಂಗಳೂರು ಮುಖ್ಯ ರಸ್ತೆಯಲ್ಲಿರುವ ಹೋಟೆಲ್‌ಗಳಲ್ಲಿ ತಿಂಡಿ-ಊಟ ಸವಿಯವುದು ಸಾಮಾನ್ಯ.
ಆದರೆ ಇದೀಗ ಹೋಟೆಲ್‌ಗಳು ಅಡುಗೆ ಅನಿಲದ ಕೊರತೆಯಿಂದ ಮುಚ್ಚಿದ ಪರಿಣಾಮ ಪ್ರವಾಸಿಗರು ಪಾರದಾಡುವಂತಹ ಪ್ರಸಂಗ ಎದುರಾಗಿದೆ. ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತೆರಳುವ ಮುಖ್ಯ ರಸ್ತೆಯ ಮುಂಭಾಗದ ತಿರುಮಲ ಹೋಟೆಲ್‌ನ ಮಾಲೀಕ ಗೋವಿಂದ್ ಅವರು ಇದೀಗ ನೂತನವಾಗಿ ಸೌದೆ ಒಲೆಯನ್ನು ನಿರ್ಮಾಣ ಮಾಡಿ ಹೊಟೇಲ್‌ನಲ್ಲಿ ಅಡುಗೆ ತಯಾರಿಸಲು ಮುಂದಾಗಿರುವುದು ಕಂಡುಬರುತ್ತದೆ.
ಗೋಣಿಕೊಪ್ಪಲು, ಮಾ.೨೫: ಯುದ್ಧದ ಬಿಸಿ ನಗರದಲ್ಲಿಯೂ ಕಾಣಿಸಿಕೊಂಡಿದ್ದು ಅಡುಗೆ ಅನಿಲ ಕೊರತೆಯಿಂದ ೫೫ ವರ್ಷದ ಇತಿಹಾಸ ಇರುವ ಗೋಣಿಕೊಪ್ಪ ಮುಖ್ಯ ರಸ್ತೆಯ ಶಾಲಿಮಾರ್ ರೆಸ್ಟೋರೆಂಟ್ ಬಂದ್ ಆಗಿದೆ. ಕಳೆದ ಕೆಲ ದಿನಗಳಿಂದ ರೆಸ್ಟೋರೆಂಟ್ ಮುಚಲ್ಪಟ್ಟಿದ್ದು ಮಾಲೀಕರು ಮತ್ತು ಕೆಲಸಗಾರರು ಕಂಗಾಲಗಿದ್ದಾರೆ. ಅಡುಗೆ ತಯಾರಿಕೆಗೆ ಸೌದೆಯ ಮೊರೆ ಹೋದರೂ ಪ್ರಯೋಜನ ಆಗುತ್ತಿಲ್ಲ ಎಂದು ರೆಸ್ಟೋರೆಂಟ್ ಮಾಲೀಕರಾದ ಮಾಚಿಮಾಡ ತಿಮ್ಮಯ್ಯ (ಚಂದ್ರ) ತಮ್ಮ ಅಭಿಪ್ರಾಯ ಹಂಚಿಕೊAಡರು. ಸಿಬ್ಬಂದಿಗಳಿಗೆ ವೇತನ, ಮಳಿಗೆಯ ಬಾಡಿಗೆ ಇತ್ಯಾದಿ ಖರ್ಚು ವೆಚ್ಚಗಳನ್ನು ಭರಿಸಲು ಕಷ್ಟವಾಗುತ್ತಿದೆ.
ಚೆಟ್ಟಳ್ಳಿ, ಮಾ. ೨೫: ಅಡುಗೆ ಅನಿಲ ಕೊರತೆ ಚೆಟ್ಟಳ್ಳಿ ವ್ಯಾಪ್ತಿಯ ಸಣ್ಣಪುಟ್ಟ ಹೊಟೇಲ್ ಉದ್ಯಮಗಳಿಗೆ ದೊಡ್ಡ ಸವಲಾಗಿ ಪರಿಣಮಿಸಿದೆ.
ಕಳೆದ ಕೆಲ ದಿನಗಳಿಂದ ಅಡುಗೆ ಅನಿಲ ಸಿಗದೆ ಇರುವುದರಿಂದ ಎರಡು ಹೊಟೇಲುಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ. ಇನ್ನೂ ಎರಡು ಹೊಟೇಲುಗಳು ಸೌದೆ ಒಲೆ ಬಳಸಿ ಅಡುಗೆ ಮಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಟೇಲ್ ಮಾಲೀಕರ ಪ್ರಕಾರ, ಅನಿಲ ಕೊರತೆಯಿಂದ ದೈನಂದಿನ ವ್ಯವಹಾರಕ್ಕೆ ತೀವ್ರ ಹೊಡೆತ ಬಿದ್ದಿದ್ದು, ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಊಟ ಒದಗಿಸುವುದೂ ಕಷ್ಟವಾಗುತ್ತಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಸಮಯ ಹೆಚ್ಚು ತೆಗೆದು ಕೊಳ್ಳುವುದು ಮಾತ್ರವಲ್ಲದೆ, ವೆಚ್ಚವೂ ಹೆಚ್ಚಾಗಿದೆ ಎಂದು ಹೊಟೇಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡಂಗ, ಮಾ ೨೫: ಅಡುಗೆ ಅನಿಲ ಕೊರತೆ ಯಿಂದ ಕಡಂಗದ ಎಂ.ಆರ್ ಹೊಟೇಲ್ ಮತ್ತು ಫೇಮಸ್ ಹೋಟೆಲ್ ಕಳೆದ ಕೆಲ ದಿನಗಳಿಂದ ಮುಚಲ್ಪ ಟ್ಟಿದ್ದು ಮಾಲೀಕರು ಮತ್ತು ಕೆಲಸಗಾರರು ಕಂಗಾಲಾಗಿದ್ದಾರೆ. ಕೆಲವೊಂದು ಹೊಟೇಲುಗಳಲ್ಲಿ ಸೌದೆ ಬಳಸಿ ಅಡುಗೆ ಮಾಡುತ್ತಿರುವ ದೃಶ್ಯವು ಕಂಡು ಬಂದಿದೆ.
ಸಿದ್ದಾಪುರ ಮಾ.೨೫: ಸಿದ್ದಾಪುರದ ಹಲವಾರು ಹೋಟೆಲ್‌ಗಳು ಅಡುಗೆ ಅನಿಲದ ಕೊರತೆಯಿಂದ ಬಂದ್ ಮಾಡಲಾಗಿದೆ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಮೂರು
ಹೋಟೆಲ್‌ಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಇರುವ ಕೆಲವು ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಇದಲ್ಲದೆ ಸಿದ್ದಾಪುರ ವ್ಯಾಪ್ತಿಯ ಬೇಕರಿಯಲ್ಲಿ ಕೂಡ ತಿಂಡಿ ಮಾಡಲು ಗ್ಯಾಸ್ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಕೋಳಿ ಮಾಂಸದ ಅಂಗಡಿಯಲ್ಲಿ ಕೋಳಿಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ತಯಾರಿಸಲು ಕೂಡ ಸಮಸ್ಯೆ ಎದುರಾಗಿದೆ ಎಂದು ಕೋಳಿ ಅಂಗಡಿ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಿದ್ದಾಪುರದಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಹೊರರಾಜ್ಯದ ನಿವಾಸಿ ಬೀರ್ ಸಿಂಗ್ ಪಾನಿಪುರಿ ತಯಾರಿಸಲು ಹಾಗೂ ಗೋಬಿ ಮಂಚೂರಿ ತಯಾರು ಮಾಡಲು ಗ್ಯಾಸ್‌ನ ಕೊರತೆಯಿಂದಾಗಿ ಅಂಗಡಿಯನ್ನು ಮುಚ್ಚಲಾಗುವುದೆಂದು ತಿಳಿಸಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿರುವ ಪ್ಯಾರಡೈಸ್ ಹೋಟೆಲ್ ಮಾಲೀಕರಾದ ವಿ.ಕೆ. ಜಾಫರ್ ಅಲಿ, ‘ಶಕ್ತಿ’ಯೊಂದಿಗೆ ಮಾತನಾಡಿ, ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಮರ್ಪಕವಾಗಿ ಸಿಗದೇ ಸಮಸ್ಯೆ ಎದುರಾಗಿದೆ, ಹೋಟೆಲ್ ಮುಚ್ಚಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಚೀಲಗಳ ಬೆಲೆ ಗಗನಕ್ಕೆ!
ಯುದ್ಧದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಚೀಲಗಳ ಬೆಲೆ ಗಗನಕ್ಕೆ ಏರಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಮತ್ತಷ್ಟು ವಸ್ತುಗಳ ಬೆಲೆಗಳು ಗಗನಕ್ಕೆ ಏರುವ ಸಾಧ್ಯತೆಯಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆÀದಂತ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಂಡುಬAದಿದೆ.