ಸೋಮವಾರಪೇಟೆ, ಮಾ. ೨೫: ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು, ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಕುಶಾಲನಗರ ಭಾಗದಿಂದ ಸೋಮವಾರಪೇಟೆಗೆ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಪಟ್ಟಣ ಸಮೀಪದ ಕರ್ಕಳ್ಳಿ ಗ್ರಾಮದ ಎಸ್.ಟಿ. ಯಶವಂತ್ ಹಾಗೂ ಎಸ್.ಡಿ. ಚೇತನ್ ಅವರುಗಳನ್ನು ವಶಕ್ಕೆ ಪಡೆದಿದ್ದಾರೆ. ಕುಶಾಲನಗರ ಮಾರ್ಗವಾಗಿ ಗಾಂಜಾ ತಂದು ಸೋಮವಾರಪೇಟೆ ಭಾಗದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದ್ದು, ಇವರುಗಳೂ ಸಹ ಗಾಂಜಾ ವ್ಯಸನಿಗಳಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳಿಂದ ತೆನೆ ಬರಿತ ೩೩೯ ಗ್ರಾಂ ಗಾಂಜಾ ಮತ್ತು ಮಾರಾಟ ಮಾಡಲು ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ನಿರೀಕ್ಷಕರಾದ ಕೆ.ಬಿ. ರಾಜೇಂದ್ರ, ಪೇದೆ ಹೆಚ್.ಎ. ರಾಜು ಮತ್ತು ವಾಹನ ಚಾಲಕ ಮಧುಸೂದನ್ ಭಾಗವಹಿಸಿದ್ದರು.