ಐಗೂರು, ಮಾ. ೧೮. ಉತ್ತಮ ಮಳೆಯಾಗಿ ಫಸಲು ಭರಿತ ಬೆಳೆಯಾಗಿ ನಾಡು ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿ ಐಗೂರು ಗ್ರಾಮಸ್ಥರು ಬೆಟ್ಟವನ್ನೇರಿ ಪೂಜೆ ಸಲ್ಲಿಸಿದರು.
ಮನು ಭಟ್ಟರ ನೇತೃತ್ವದಲ್ಲಿ ಐಗೂರಿನ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಯುವಕರು ಸುಮಾರು ಮೂರು ಕಿಲೋಮೀಟರ್ ದೂರದ ಮಳೆ ಮಹದೇಶ್ವರ ಬೆಟ್ಟವನ್ನೇರಿದರು. ಅರ್ಚಕರಾದ ಸುಧೀಂದ್ರ ಭಟ್ ನೇತೃತ್ವದಲ್ಲಿ ಬೆಟ್ಟದ ಈಶ್ವರನಿಗೆ ಕಲಶ ಪೂಜೆ, ಕುಂಕುಮಾರ್ಚನೆ ನಡೆದು ನೈವೇದ್ಯ ಅರ್ಪಿಸಲಾಯಿತು.
ಪ್ರಸಾದ ವಿನಿಯೋಗದ ನಂತರ ಬೆಟ್ಟವನ್ನು ಇಳಿದು ಗ್ರಾಮದ ಈಶ್ವರ ದೇವಾಲಯದಲ್ಲಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಪೂಜೆಯಲ್ಲಿ ಎಂ.ಸಿ. ಗಣೇಶ್, ಸಂಜಯ್, ಎಂ.ಬಿ. ಪೂವಯ್ಯ, ತ್ರಿವರ್ಣ, ಬೆಳ್ಳಿಯಪ್ಪ, ಲಿಂಗೇರಿ ರಾಜೇಶ್, ಕಡ್ಲೆರ ಹೊನ್ನಪ್ಪ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.