ಮಡಿಕೇರಿ, ಮಾ. ೧೮: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಹಲವು ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು, ಈ ಕೆಲಸ ತಾ. ೨೨ ರಿಂದ ಆರಂಭಗೊಳ್ಳಲಿದೆ.
ರೂ. ೧ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕೆಲಸಕ್ಕೆ ಯೋಜನೆ ರೂಪಿಸಲಾಗಿದೆ. ಈ ದೇವಾಲಯದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಮೃತ್ಯುಂಜಯ ಹೋಮ ಸೇರಿದಂತೆ ಇನ್ನಿತರ ಪೂಜಾ ವಿಧಿವಿಧಾನಗಳು ನಡೆದುಕೊಂಡು ಬರುತ್ತಿದ್ದು, ಇದೀಗ ದೇವಾಲಯದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೂ ಪೂಜಾ ವಿಧಿವಿಧಾನಗಳು ಎಂದಿನAತೆ ಜರುಗಲಿವೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಚೋನಿರ ಸುಬ್ರಮಣಿ ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
೩ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವ ವಿಶ್ವಾಸ ಹೊಂದಲಾಗಿದೆ. ದೇವಾಲಯದ ಈಗಿರುವ ಗರ್ಭಗುಡಿ, ತೀರ್ಥ ಮಂಟಪ ಹಾಗೂ ಗಣಪತಿ ಗುಡಿಯ ಕೆಲಸವನ್ನು ಹೊಸದಾಗಿ ನಿರ್ವಹಿಸಲಾಗುತ್ತಿದೆ. ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಈ ಕೆಲಸ, ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ಅವರುಗಳು ತಿಳಿಸಿದ್ದಾರೆ.
ಕಪ್ಪು ಶಿಲೆಯಲ್ಲಿ ಗರ್ಭಗುಡಿಯ ಕೆಲಸ ನಡೆಸಲಾಗುವುದು. ಮುರುಡೇಶ್ವರದ ಶ್ರೀಧರ್ ನಾಯಕ್ ಅವರು ಶಿಲೆಗಳ ತಯಾರಿ ಮಾಡಲಿದ್ದಾರೆ. ದೇವಾಲಯ ಎತ್ತರದ ಪ್ರದೇಶದಲ್ಲಿರುವುದರಿಂದ ಹಲವು ಮುಂಜಾಗ್ರತೆಗಳನ್ನು ವಹಿಸಿ ದೊಡ್ಡ ಕ್ರೇನ್ ಬಳಸಿ ಕೆಲಸ ನಿರ್ವಹಿಸಲಾಗುವುದು. ಜೀರ್ಣೋದ್ಧಾರ ಸಂದರ್ಭದಲ್ಲಿ ಮುಖ್ಯ ಸ್ಥಳದಲ್ಲಿ ಪೂಜೆಗಳು ಇರುವುದಿಲ್ಲ. ಆದರೆ ಹೊರ ಭಾಗದಲ್ಲಿ ಪ್ರಶ್ನೆಯಂತೆ ಬಾಲಾಲಯಕ್ಕೆ ಜಾಗ ನಿಗದಿಪಡಿಸಲಾಗಿದ್ದು, ಇಲ್ಲಿ ನಿತ್ಯಪೂಜೆ, ಪುನಸ್ಕಾರಗಳು ಎಂದಿನAತೆ ಮುಂದುವರಿಯಲಿದೆ.
ಈ ಕಾಮಗಾರಿ ಹಿನ್ನೆಲೆಯಲ್ಲಿ ದೇವರನ್ನು ಬಾಲಾಲಯದಲ್ಲಿರಿಸಿ ಈ ಕೆಲಸ ನಿರ್ವಹಿಸಲಾಗುವುದು. ಇದನ್ನು ಪ್ರಶ್ನೆಯ ಮೂಲಕ ತೀರ್ಮಾನಿಸಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಚಿಂತನೆ ಮಾಡಲಾಗಿದೆ. ರೂ. ೧ ಕೋಟಿಯ ಯೋಜನೆ ಇದಾಗಿದ್ದು, ಭಕ್ತಾದಿಗಳಿಂದ, ದಾನಿಗಳಿಂದ ಹಣ ಕ್ರೋಢೀಕರಿಸಲಾಗುತ್ತಿದೆ. ಸ್ಥಳೀಯ ವ್ಯಾಪ್ತಿಯ ಗ್ರಾಮಸ್ಥರೂ ಸಹಕಾರ ನೀಡುತ್ತಿದ್ದು, ನಿರ್ದಿಷ್ಟವಂತಿಗೆ ಪಡೆಯಲಾಗುತ್ತಿದೆ. ಜೀರ್ಣೋದ್ಧಾರ ಕೆಲಸಕ್ಕೆ ಕೈಜೋಡಿಸುವವರು ಗೂಗಲ್ ಪೇ ಸಂಖ್ಯೆ : ೮೧೯೭೮೭೦೦೫೮ ಸಂಖ್ಯೆಗೆ ಆರ್ಥಿಕ ಸಹಾಯ ನೀಡಬಹುದಾಗಿದೆ.