ಸಿದ್ದಾಪುರ, ಮಾ. ೧೮: ಯೂತ್ ಹೆಲ್ತ್ ಕೇರ್ ಚಾರಿಟಿ ಟ್ರಸ್ಟ್ ವತಿಯಿಂದ ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ಸರ್ವಧರ್ಮ ಸೌಹಾರ್ದ ಬೃಹತ್ ಇಫ್ತಾರ್ ಸಂಗಮವನ್ನು ಗುಹ್ಯ ಗ್ರಾಮದ ಮಸೀದಿ ಆವರಣದಲ್ಲಿ ಆಯೋಜಿಸಲಾಗಿತ್ತು.

ಸಮಾಜಸೇವಕ ಚಂದ್ರನ್ ಮಾತನಾಡಿ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗುಹ್ಯ ಗ್ರಾಮದಲ್ಲಿ ವಿವಿಧ ಹಬ್ಬ ಆಚರಣೆಗಳನ್ನು ಎಲ್ಲರೂ ಒಗ್ಗೂಡಿ ಮಾಡಲಾಗುತ್ತಿದ್ದು ಪರಸ್ಪರ ಶಾಂತಿ ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ. ಬಶೀರ್ ಮಾತನಾಡಿ, ಹೆಲ್ತ್ ಕೇರ್ ಚಾರಿಟಿ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವಾ ಕಾಳಜಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ ಎಂದು ಹೇಳಿದರು. ಈ ಸಂದರ್ಭ ಯೂತ್ ಹೆಲ್ತ್ ಕೇರ್ ಚಾರಿಟಿ ಟ್ರಸ್ಟ್ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಹಂಸ, ಖಜಾಂಜಿ ರಶೀದ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮುಖಂಡರುಗಳು ಪಾಲ್ಗೊಂಡಿದ್ದರು.