ಮಡಿಕೇರಿ, ಮಾ. ೧೮: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಠಾಣಾ ವ್ಯಾಪ್ತಿಯ ಆವಂದೂರು ಗ್ರಾಮದಲ್ಲಿ ಕೋವಿ ತಪಾಸಣೆ, ನವೀಕರಣದೊಂದಿಗೆ ಕೋವಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಸ್ತುತ ಹಲವರು ವರ್ಷಂಪ್ರತಿ ತಮ್ಮ ಕೋವಿ ಪರವಾನಗಿಯನ್ನು ನವೀಕರಿಸಿಕೊಳ್ಳದಿರುವುದು, ಲೈಸನ್ಸ್ದಾರರ ಬದಲು ಬೇರೆಯವರು ಬಳಸುವುದು, ವಾರಸುದಾರರು ಮೃತಪಟ್ಟಲ್ಲಿ ಕೋವಿಯನ್ನು ಠೇವಣಿ ಮಾಡಿ ಬಳಿಕ ಅದನ್ನು ವರ್ಗಾಯಿಸಿಕೊಳ್ಳುವುದು ಇಂತಹ ವಿಚಾರಗಳ ಬಗ್ಗೆ ಜಾಗೃತಿಯೊಂದಿಗೆ, ನವೀಕರಣ ಕಾರ್ಯ ನಡೆಸಲಾಯಿತು. ಜಮ್ಮಾ ಹಕ್ಕಿನಂತೆ ಕೋವಿ ಹೊಂದಿದ್ದರೂ ಅದರ ದುರ್ಬಳಕೆ ಆಗಬಾರದು. ಕೆಲವು ಗ್ರಾಮಗಳು ಠಾಣಾ ವ್ಯಾಪ್ತಿಯಿಂದ ದೂರದಲ್ಲಿರುವುದರಿಂದ ಈ ಕಾರ್ಯವನ್ನು ಗ್ರಾಮಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ನಡೆಸಲಾಯಿತು ಎಂದು ವೃತ್ತ ನಿರೀಕ್ಷಕ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಬೀಟ್ ಸಿಬ್ಬಂದಿಗಳಾದ ಎ.ಎಸ್.ಐ. ಬೋಪಯ್ಯ, ಸಿಬ್ಬಂದಿ ಬಿ.ಡಿ. ಮಂಜುನಾಥ್ ಪಾಲ್ಗೊಂಡಿದ್ದರು. ಸುಮಾರು ೬೦ ರಷ್ಟು ಮಂದಿ ಇದರ ಪ್ರಯೋಜನ ಪಡೆದುಕೊಂಡರು.