ಮಡಿಕೇರಿ, ಮಾ. ೧೮: ಕೊಡಗು ವಿದ್ಯಾಲಯದ ಬಾಲವಾಟಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಆರೋಹಣ ಸಮಾರಂಭ ಪದವಿ ಪ್ರದಾನ ಕಾರ್ಯಕ್ರಮವು ಮಡಿಕೇರಿಯ ಕೊಡಗು ವಿದ್ಯಾಲಯದ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಪುಟ್ಟ ಮಕ್ಕಳು ದೀಪಗಳೊಂದಿಗೆ ವೇದಿಕೆಗೆ ಆಗಮಿಸಿದರು. ಬಳಿಕ ಮುಖ್ಯ ಅತಿಥಿ ಆಗ್ನೆಸ್ ಮುತ್ತಣ್ಣ, ಶಾಲೆಯ ಪ್ರಾಶುಪಾಲೆ ಸುಮಿತ್ರ ಕೆ.ಎಸ್. ಹಾಗೂ ವ್ಯವಸ್ಥಾಪಕ ರವಿ ಪಿ. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ನಿವೃತ್ತ ಉಪ ಪ್ರಾಂಶಪಾಲರಾದ ಆಗ್ನೆಸ್ ಮುತ್ತಣ್ಣ ಮಾತನಾಡಿ, ಎಲ್ಲರೂ ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವವನ್ನು ಹೊಂದಿರಬೇಕು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಶಿಕ್ಷಕರ ಮಾತು ವೇದವಾಕ್ಯದಂತೆ ಇದ್ದು, ಶಿಕ್ಷಕರ ಮಾರ್ಗದರ್ಶನವು ಅವರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮಕ್ಕಳು ತಮ್ಮ ಸಮಯದ ಹೆಚ್ಚಿನ ಭಾಗವನ್ನು ಶಿಕ್ಷಕರ ಜೊತೆಗೆ ಕಳೆಯುವುದರಿಂದ ಪೋಷಕರು ಸಹ ತಮ್ಮ ಕರ್ತವ್ಯವನ್ನು ಅರಿತು ಮಕ್ಕಳ ಶಿಕ್ಷಣದಲ್ಲಿ ಸಹಕರಿಸಬೇಕು ಎಂದು ಕರೆ ನೀಡಿದರು. ಶಾಲಾ ಪ್ರಾಶುಪಾಲರಾದ ಕೆ.ಎಸ್. ಸುಮಿತ್ರ ಮಾತನಾಡಿ, ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳು ಓದಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಪೋಷಕರು ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರ ವಹಿಸಬೇಕು ಹಾಗೂ ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಫೋನ್ ನೀಡುವುದನ್ನು ತಪ್ಪಿಸಬೇಕು ಎಂದರು. ಸಂಯೋಜಕಿ ಭಾರತಿ ಕೆ.ಕೆ. ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೋನಾ ಮುತ್ತಮ್ಮ ನಿರೂಪಿಸಿ, ಬೊಳ್ಳಮ್ಮ ಎಂ.ಪಿ. ಅತಿಥಿ ಪರಿಚಯ ಮಾಡಿ, ರಮ್ಯಾ ಟಿ.ಪಿ. ವಂದಿಸಿದರು.