ಸೋಮವಾರಪೇಟೆ, ಮಾ. ೧೮: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದ ವಳಗುಂದ ಎಂಬಲ್ಲಿ ಅರಣ್ಯ ಇಲಾಖೆಯವರು ಕಾಫಿ ತೋಟವನ್ನು, ಅರಣ್ಯ ಒತ್ತುವರಿ ಎಂಬ ಕಾರಣ ನೀಡಿ ತೆರವಿಗೆ ಮುಂದಾದ ಸಂದರ್ಭ ರೈತರು ಹಾಗೂ ಅರಣ್ಯ ಇಲಾಖೆಯವರ ನಡುವೆ ಜಟಾಪಟಿ ನಡೆಯಿತು.

ಮಸಗೋಡು ಗ್ರಾಮದ ಸರ್ವೆ ನಂಬರ್ ೨೪/೧ರಲ್ಲಿ ಹೇಮಂತ್ ಎಂಬವರ ಸ್ವಾಧೀನದಲ್ಲಿದ್ದ ೨.೧೦ ಎಕರೆ ಜಾಗವನ್ನು ಅರಣ್ಯ ಇಲಾಖೆಯವರು ಜೆಸಿಬಿ ಯಂತ್ರÀಗಳನ್ನು ಬಳಸಿ ತೆರವುಗೊಳಿಸಲು ಮುಂದಾದ ಸಂದರ್ಭ ರೈತರು ತೀವ್ರ ಪ್ರತಿರೋಧ ತೋರಿದರು.

ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಪ್ರತಿರೋಧ ತೋರಿದ ರೈತರು, ಸರ್ಕಾರವು ಸಿ ಮತ್ತು ಡಿ ಲ್ಯಾಂಡ್, ಸರ್ಕಾರಿ ಭೂಮಿ ಒತ್ತುವರಿ ಸೇರಿದಂತೆ ಕೊಡಗಿನ ಭೂ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯು ಕಾರ್ಯೋನ್ಮುಖವಾಗಿರುವಾಗಲೇ ನೀವುಗಳು ಏಕಾಏಕಿ ತೆರವಿಗೆ ಬರುತ್ತಿರುವುದು ಸರಿಯಲ್ಲ ಎಂದು ಸುರೇಶ್ ಆಕ್ಷೇಪಿಸಿದರು.

ಸಮಿತಿಯ ವರದಿ ೬ ತಿಂಗಳ ಕಾಲ ಸರ್ಕಾರವೇ ಕಾಲಾವಕಾಶ ನೀಡಿದೆ. ಈ ಮಧ್ಯೆ ಅರಣ್ಯ ಇಲಾಖೆಯವರು ಬಲವಂತವಾಗಿ ಅರಣ್ಯ ಒತ್ತುವರಿ ಎಂಬ ನೆಪವೊಡ್ಡಿ ತೆರವಿಗೆ ಮುಂದಾದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚಕ್ರವರ್ತಿ ಸುರೇಶ್ ಎಚ್ಚರಿಸಿದರು.

ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ತಾವುಗಳು ತೆರವಿಗೆ ಆಗಮಿಸಿರುವುದಾಗಿ ಫಾರೆಸ್ಟರ್ ಪ್ರಶಾಂತ್ ಹೇಳಿದರು. ಈ ಸಂದರ್ಭ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದರು.

೧೯೯೯ರವರೆಗೂ ಸರ್ಕಾರಿ ಪೈಸಾರಿ ಎಂದು ನಮೂದಾಗಿದ್ದ ಜಾಗವನ್ನು ಇದೀಗ ಅರಣ್ಯ ಎಂದು ಮಾಡಲಾಗಿದೆ. ಹಲವಾರು ದಶಕಗಳ ಹಿಂದಿನಿAದಲೇ ಈ ಸ್ಥಳದಲ್ಲಿ ಕೃಷಿ ಮಾಡಿಕೊಂಡು ಬರಲಾಗಿದೆ. ಇದೀಗ ಏಕಾಏಕಿ ಅರಣ್ಯ ಇಲಾಖೆಯವರು ಬಿಡಿಸಲು ಬಂದಿರುವುದು ಸರಿಯಲ್ಲ ಎಂದರು. ವಿಶೇಷ ಸಮಿತಿಗೆ ೬ ತಿಂಗಳ ಒಳಗೆ ವರದಿ ನೀಡುವಂತೆ ಸರ್ಕಾರ ತಿಳಿಸಿದೆ. ಸಮಿತಿಯ ವರದಿ ಬರುವವರೆಗೂ ತೆರವು ಮಾಡಬಾರದು ಎಂದು ಆಗ್ರಹಿಸಿದರಲ್ಲದೇ, ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ಸಂಜೆ ೬.೩೦ಕ್ಕೆ ನೋಟೀಸ್ ಕೊಟ್ಟಿದ್ದಾರೆ. ಇವತ್ತು ತೆರವಿಗೆ ಬಂದಿದ್ದಾರೆ. ಕನಿಷ್ಟ ೭ ದಿನಗಳ ಒಳಗೆ ನೋಟೀಸ್ ನೀಡಬೇಕು. ಯಾವುದೇ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತಿಳಿಸಿಲ್ಲ. ಅರಣ್ಯ ಇಲಾಖೆಯ ಇಂತಹ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಗಿಬಿದ್ದರು.

ಕಳೆದ ವರ್ಷ ನವಂಬರ್ ೨೯ರಂದು ಸರ್ಕಾರ ಆದೇಶ ಹೊರಡಿಸಿದೆ. ರೈತರ ಜಮೀನು ಇದ್ದಲ್ಲಿ ಅದನ್ನು ಪರಿಶೀಲಿಸಬೇಕು. ತಕ್ಷಣಕ್ಕೆ ಯಾವ ಕ್ರಮಕ್ಕೂ ಮುಂದಾಗಬಾರದು ಎಂಬ ಆದೇಶ ಇದ್ದರೂ ಸಹ ಇಲಾಖೆಯವರು ಪದೇ ಪದೇ ರೈತರನ್ನು ಹಿಂಸಿಸುತ್ತಿದ್ದಾರೆ. ಆನೆ ಮಾನವ ಸಂಘರ್ಷವನ್ನು ತಡೆಯಲು ವಿಫಲವಾಗಿರುವ ಅರಣ್ಯ ಇಲಾಖೆ, ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇವರ ದಬ್ಬಾಳಿಕೆ ಹೀಗೆ ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಚಕ್ರವರ್ತಿ ಸುರೇಶ್ ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ಕೊಡಗಿನ ಮಟ್ಟಿಗೆ ಅನುಪಾಲನಾ ವರದಿ ಸರ್ಕಾರಕ್ಕೆ ಸೇರುವ ಮೊದಲೇ ಅರಣ್ಯ ಇಲಾಖೆ ಸಣ್ಣಪುಟ್ಟ ರೈತರ ಜಮೀನನ್ನು ಕಸಿದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ಇದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನದವರೆಗೂ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಜಟಾಪಟಿ ನಡೆಯಿತು. ನಂತರ ಅರಣ್ಯ ಇಲಾಖೆಯವರು ಸ್ಥಳದಿಂದ ವಾಪಸ್ ಆದರು. ಅರಣ್ಯ ಇಲಾಖೆಯ ೨೦ಕ್ಕೂ ಅಧಿಕ ಸಿಬ್ಬಂದಿಗಳು, ಆಗಮಿಸಿದ್ದರೆ, ನೂರಾರು ರೈತರು ಸ್ಥಳದಲ್ಲಿ ಜಮಾಯಿಸಿ ಪ್ರತಿರೋಧ ತೋರಿದರು.

ರೈತ ಹೋರಾಟ ಸಮಿತಿಯ ಕಾರ್ಯದರ್ಶಿ ದಿವಾಕರ್, ನಿರ್ದೇಶಕ ದೇಶ್‌ರಾಜ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್, ಹರಗ ಗ್ರಾಮಾಧ್ಯಕ್ಷ ಧರ್ಮಪ್ಪ, ಬೆಟ್ಟದಳ್ಳಿಯ ಸಂಪತ್, ಕೊತ್ನಳ್ಳಿಯ ರಾಜೇಶ್, ಲಕ್ಷö್ಮಣ್, ಮಚ್ಚಂಡ ಅಶೋಕ್, ವಿ.ಎಂ. ವಿಜಯ, ಪ್ರಮುಖರಾದ ಪ್ರಶಾಂತ್, ವಿನಯ್ ಸಂಭ್ರಮ್, ಎಸ್.ಎಂ. ಡಿಸಿಲ್ವಾ, ಹೇಮಂತ್ ಸೇರಿದಂತೆ ನೂರಾರು ರೈತರು ಸ್ಥಳದಲ್ಲಿದ್ದರು.