ಮಡಿಕೇರಿ, ಮಾ. ೧೮: ಕೊಡಗು ಜಿಲ್ಲೆಯ ಆದಿವಾಸಿ ಕುಟುಂಬಗಳಿಗೆ ನಿವೇಶನ ಮತ್ತು ಮನೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ತೋಟಗಳ ಲೈನ್‌ಮನೆಯಲ್ಲಿ ವಾಸಿಸುತ್ತಿರುವವರು ಹಾಗೂ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ಆದಿವಾಸಿಗಳಿಗೆ ನಿವೇಶನ ನೀಡಬೇಕು. ಅಗತ್ಯ ಸೌಕರ್ಯಗಳೊಂದಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಸರ್ಕಾರ ದೊಡ್ಡದೊಂದು ಕಾರ್ಯಕ್ರಮದ ಮೂಲಕ ಆದಿವಾಸಿಗಳಿಗೆ ನೀಡಬೇಕು. ಮುಖ್ಯ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕೂಡಲೇ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.ಅರಣ್ಯದಿಂದ ಆದಿವಾಸಿಗಳನ್ನು ಹೊರಹಾಕಬಾರದು. ಅರಣ್ಯ ಮತ್ತು ಭೂಮಿಯ ಮೇಲಿನ ಆದಿವಾಸಿಗಳ ಹಕ್ಕನ್ನು ಗುರುತಿಸಬೇಕು, ಅವರ ಮೇಲಿನ ಎಲ್ಲ ಬಗೆಯ ಕಿರುಕುಳಗಳನ್ನೂ ತಪ್ಪಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮನವಿ ಪತ್ರ ಸ್ವೀಕರಿಸಿದರು. ಹೋರಾಟಗಾರರಾದ ಪಿ.ಆರ್.ಭರತ್, ಜೆ.ಆರ್.ಪ್ರೇಮಾ, ವೈ.ಸಿ. ಭಾಗ್ಯಚೆಂಗಪ್ಪ, ವೈ.ಸಿ.ಮುತ್ತ, ರವಿ, ವೈ.ವಿ.ರವಿ, ವೈ.ಎಸ್.ಪಾರ್ವತಿ ಎಚ್.ಬಿ.ರಮೇಶ್, ಕೆ.ರಘು ಭಾಗವಹಿಸಿದ್ದರು.