ಮಡಿಕೇರಿ, ಮಾ. ೧೬: ಐನ್‌ಮನೆಯಲ್ಲಿಟ್ಟಿದ್ದ ದೇವಾಲಯದ ಪಾರಂಪರಿಕ ಆಭರಣಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಳುಗೋಡು, ಬಿಳೂರು ಗ್ರಾಮದ ಎ.ಎ. ಕ್ಯಾಲಿ ಕುಟ್ಟಪ್ಪ (೧೯), ಹಾತೂರು ಗ್ರಾಮದ ವಿ.ಎಸ್. ಯಶ್ವಂತ್ (೨೦), ಹಾಸನದ ತೇಜೂರು ಗ್ರಾಮದ ವೈ ಹರ್ಷನ್ (೧೯), ಮೈಸೂರಿನ ಬೋಗಾದಿಯ ಡಿ. ಶ್ರೇಯಸ್ (೨೪) ಬಂಧಿತ ಆರೋಪಿಗಳು.
ಬಿಳೂರು ಗ್ರಾಮದ ಆದೇಂಗಡ ಕುಟುಂಬದ ಐನ್‌ಮನೆಯಲ್ಲಿ ಪೊನ್ನಪ್ಪಸಂತೆಯ ಕಲ್ಲುಗುಡ್ಡೆ ಈಶ್ವರ ದೇವಾಲಯದ ಪಾರಂಪರಿಕ ಚಿನ್ನ, ಬೆಳ್ಳಿಯ ಆಭರಣಗಳನ್ನು ಇಡಲಾಗಿತ್ತು. ಫೆ. ೨೩ ರಂದು ಐನ್‌ಮನೆಯಲ್ಲಿದ್ದ ಅಂದಾಜು ೪೦ ಗ್ರಾಂ ಚಿನ್ನ, ೨.೫ ಕೆಜಿ ಬೆಳ್ಳಿ ಆಭರಣ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ. ೫೦,೭೦೦ ನಗದು, ೨.೪೨೨ ಕೆಜಿ ಬೆಳ್ಳಿ, ೨.೫ ಗ್ರಾಂ ಚಿನ್ನ, ದ್ವಿಚಕ್ರ ವಾಹನ ಹಾಗೂ ೪ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಮಹೇಶ್ ಕುಮಾರ್ ಮಾರ್ಗದರ್ಶನ, ಸಿಪಿಐ ಶಿವರಾಜ್ ಮುಧೋಳ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಪಿಎಸ್‌ಐ ಜಿ. ನವೀನ್, ಗೋಣಿಕೊಪ್ಪ ಪಿಎಸ್‌ಐ ಬಿ.ಕೆ. ಪ್ರದೀಪ್ ಕುಮಾರ್, ಎ.ಎಸ್.ಐ. ದೇವರಾಜು, ಸಿಬ್ಬಂದಿ ಗಳಾದ, ಗೋವರ್ಧನ್, ಮಹಮ್ಮದ್ ಅಲಿ, ಸುನಿಲ್, ಹೇಮಲತಾ ರೈ, ಸಂತೋಷ್, ವೇಣು ಗೋಪಾಲ್, ಪುನೀತ್, ಪ್ರವೀಣ್, ಬಾಳಪ್ಪ, ತಾಂತ್ರಿಕ ವಿಭಾಗದ ರಾಜೇಶ್, ಶರತ್ ರೈ ಭಾಗವಹಿಸಿದ್ದರು.