ಮಡಿಕೇರಿ, ಮಾ. ೧೬: ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಕೊಂಡು ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಮತ್ತೋರ್ವನ ಆಧಾರ್ ಕಾರ್ಡ್ ಬಳಸಿಕೊಂಡು ಕೆಲಸಕ್ಕೆ ಸೇರಿ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (೨೭) ಬಂಧಿತ ಆರೋಪಿ. ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ವಾಸವಿದ್ದ ಡಾ. ಪಾರ್ಥಸಾರಥಿ ಎಂಬವರ ಅಣ್ಣ ವಯೋವೃದ್ಧರಾಗಿದ್ದು, ಅವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಭದ್ರಪ್ಪ ಬಸಪ್ಪನನ್ನು ನೇಮಿಸಲಾಗಿತ್ತು. ಆದರೆ, ಈತ ಕೆಲಸಕ್ಕೆ ಸೇರುವ ಮುನ್ನ ಕೊಪ್ಪಳ್ಳ ಜಿಲ್ಲೆಯ ಮಹಾಂತೇಶ್ ಪೂಜಾರ ಎಂದು ನಕಲಿ ಆಧಾರ್ ಕಾರ್ಡ್ ನೀಡಿ ಪರಿಚಯಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದ. ಫೆ. ೨೮ ರಂದು ಮನೆಯಲ್ಲಿಟ್ಟಿದ್ದ ಅಂದಾಜು ಚಿನ್ನಾಭರಣ, ರೂ. ೫,೫೦,೦೦೦ ನಗದು ಕಳವು ಮಾಡಿರುವುದು ಕುರಿತು ದಾಖಲಾಗಿದ್ದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯಿಂದ ರೂ. ೫,೦೯,೦೦೦ ನಗದು, ೧೩೭ ಗ್ರಾಂ ಚಿನ್ನ, ೧ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ೨೦೨೫ರಲ್ಲಿ ದಾವಣಗೆರೆಯಲ್ಲಿ ಕಳವು ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಸೂರಜ್ ನೇತೃತ್ವ, ಸಿಪಿಐ ಪಿ.ಕೆ. ರಾಜು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಇನ್ಸ್ಪೆಕ್ಟರ್ ರಾಮಕೃಷ್ಣ, ನಗರ ಠಾಣಾಧಿಕಾರಿ ಅನ್ನಪೂರ್ಣ, ಎ.ಎಸ್.ಐ ರಾಮಪ್ಪ, ಸಿಬ್ಬಂದಿಗಳಾದ ಪ್ರಭಾಕರ್, ಗಿರೀಶ್, ಕಿರಣ್, ಕೃಷ್ಣಮೂರ್ತಿ, ಸುಧೀರ್, ಮುನೀರ್, ರಂಜಿತ್, ಪ್ರದೀಪ್, ತಾಂತ್ರಿಕ ವಿಭಾಗದ ರಾಜೇಶ್, ಶರತ್ ರೈ, ಜಯಕುಮಾರ್, ಸಂತೋಷ್, ಡಿಸಿಆರ್‌ಬಿ ವಿಭಾಗದ ಪ್ರವೀಣ್ ಹಾಗೂ ನಿರಂಜನ್ ಭಾಗವಹಿಸಿದ್ದರು.