ಸಿದ್ದಾಪುರ, ಮಾ. ೧೬: ಹುಲಿ ದಾಳಿಗೆ ಕರು ಬಲಿಯಾದ ಘಟನೆ ಬಾಡಗ -ಬಾಣಂಗಾಲ ಗ್ರಾಮದ ಬಜೆಕೊಲ್ಲಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಅಲ್ಲದೆ, ಕರುವಿನ ಕಳೇಬರ ನಾಪತ್ತೆಯಾಗಿರುವುದು ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಬಜೆಕೊಲ್ಲಿ ನಿವಾಸಿ ಶರವಣ ಕಾಫಿ ತೋಟದ ಮಾಲೀಕ ಚೊಕ್ಕಲಿಂಗA ಎಂಬವರಿಗೆ ಸೇರಿದ ಕರುವನ್ನು ಮನೆಯ ಸಮೀಪದಲ್ಲಿ ಕಟ್ಟಿ ಹಾಕಿದ್ದರು. ಸಂಜೆ ತೋಟದ ಕಾರ್ಮಿಕ ನೋಡಿದಾಗ ಕರು ಕಾಣೆಯಾಗಿತ್ತು. ಬಳಿಕ ಸ್ವಲ್ಪ ದೂರದವರೆಗೆ ಹುಡುಕಿಕೊಂಡು ಕಾಫಿ ತೋಟದೊಳಗೆ ಹೋಗುವ ಸಂದರ್ಭ ರಕ್ತದ ಕಲೆ ಕಂಡುಬAದಿದೆ. ಇದರಿಂದಾಗಿ ಆತಂಕಕ್ಕೆ ಒಳಗಾದ ಕಾರ್ಮಿಕ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಹುಲಿ ಕರುವಿನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿ ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿ ಚರಂಡಿಗೆ ಎಸೆದಿರುವ ದೃಶ್ಯ ಗೋಚರಿಸಿದೆ.
ಮಾಲೀಕರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು. ತೋಟದ ಮಾಲೀಕರು ಮತ್ತು ಕಾರ್ಮಿಕರು ಹುಲಿ ಕೊಂದು ಹಾಕಿದ್ದ ಕರುವನ್ನು ನೋಡಿದ ಸಂದರ್ಭ ಸಂಜೆ ೫ ಗಂಟೆಯ ಸಮಯಕ್ಕೆ ಕರುವಿನ ಕಳೇಬರ ಚರಂಡಿಯಲ್ಲಿಯೇ ಕಂಡುಬAದಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕರುವಿನ ಕಳೇಬರ ಅಲ್ಲಿಂದ ನಾಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರುವಿನ ಮೃತ ದೇಹವನ್ನು ಕಾಫಿ ತೋಟದೊಳಗೆ ಹುಡುಕಾಡಿದರು ಪತ್ತೆಯಾಗಿಲ್ಲ. ಕರುವಿನ ಕಳೇಬರವನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಶಂಕಿಸಲಾಗಿದೆ. ತೋಟ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಿದರು ಕರುವಿನ ಕಳೇಬರ ಪತ್ತೆಯಾಗಿಲ್ಲ.
ಈ ಘಟನೆಯಿಂದ ಕಾರ್ಮಿಕರು ಭಯಭೀತರಾಗಿದ್ದಾರೆ. ಕರುವನ್ನು ಕಳೆದುಕೊಂಡ ಹಸು ತನ್ನ ಕರುವಿಗಾಗಿ ರೋದಿಸುತ್ತಿದೆ. ಅದೃಷ್ಟವಶಾತ್ ಕರುವಿನ ಪಕ್ಕದಲ್ಲಿದ್ದ ಹಸು ಹುಲಿ ದಾಳಿಯಿಂದ ಪಾರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿಯು ಹಸುಗಳ ಮೇಲೆೆ ದಾಳಿ ನಡೆಸಿ ಕೊಂದು ಹಾಕಿದ ಘಟನೆಗಳು ನಡೆದಿದ್ದವು. ಇದೀಗ ಗ್ರಾಮದ ವ್ಯಾಪ್ತಿಯಲ್ಲಿ ಮತ್ತೆ ಹುಲಿ ಚಲನವಲನ ಕಂಡುಬAದಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. - ಎ.ಎನ್. ವಾಸು