ಕುಶಾಲನಗರ, ಮಾ. ೧೬: ಸಾಂಸ್ಕೃತಿಕ ನಾಯಕ, ಹನ್ನೆರಡನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಹಾಗೂ ಅವಹೇಳನವಾಗಿ ನಿಂದಿಸಿರುವ ರಮಾಕಾಂತ್ ಎಂಬ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಘಟಕಗಳ ಪದಾಧಿಕಾರಿಗಳು ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಬಸವೇಶ್ವರರು ಹಾಗೂ ಅಕ್ಕಮಹಾದೇವಿ ವಿರುದ್ದ ಅವಹೇಳನಕಾರಿ ಸಂದೇಶ ಹಾಕಿರುವ ವ್ಯಕ್ತಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಾಸಭಾ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕಿರಣ್ ಗೌರಯ್ಯ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು.

ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ. ನಟರಾಜು, ಸಮಾಜದ ಪ್ರಮುಖರಾದ ಸದಾಶಿವ, ಬಸವಣ್ಣಯ್ಯ, ಮಾದಾಪಟ್ಟಣ ಮೂರ್ತಿ ಇದ್ದರು.

ಬಂಧನಕ್ಕೆ ಆಗ್ರಹ

ಸೋಮವಾರಪೇಟೆ: ಬಸವಣ್ಣ ಹಾಗೂ ಅಕ್ಕಮಹಾದೇವಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಕಿಡಿಗೇಡಿಯನ್ನು ಸರ್ಕಾರ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್ ಆಗ್ರಹಿಸಿದ್ದಾರೆ.ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ನಾಡಿನ ಮೊದಲ ಮಹಿಳಾ ಕವಯತ್ರಿ ಅಕ್ಕಮಹಾದೇವಿ ಅವರು ಕನ್ನಡ ನಾಡಿನ ಹೆಮ್ಮೆ. ಅಂತಹವರ ಬಗ್ಗೆ ರಮಾಕಾಂತ್ ಎಂಬಾತ ಅಸಹ್ಯ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿ ಪೋಸ್ಟ್ ಹಾಕಿರುವುದು ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಹೇಶ್, ಈ ಕಿಡಿಗೇಡಿಯನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.