ಸೋಮವಾರಪೇಟೆ, ಮಾ. ೧೬: ಉತ್ತರ ಕೊಡಗಿನ ಮಲೆನಾಡು ಭಾಗದಲ್ಲಿ ಶ್ರದ್ಧಾಭಕ್ತಿಯ ತಾಣಗಳಾಗಿ ರೂಪುಗೊಂಡಿರುವ ಗ್ರಾಮ ದೇವತೆ ಸಬ್ಬಮ್ಮ ತಾಯಿಯ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ಸರ್ಕಾರದಿಂದ ರೂ. ೧.೨೦ ಕೋಟಿ ಅನುದಾನವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಒದಗಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಇದೇ ಪ್ರಥಮ ಬಾರಿಗೆ ಎಂಬAತೆ ಗ್ರಾಮೀಣ ಭಾಗದಲ್ಲಿರುವ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ತಲಾ ೧೦ ಲಕ್ಷ ಅನುದಾನ ಒದಗಿಸಲಾಗಿದೆ. ವಾರ್ಷಿಕವಾಗಿ ೧೨ ದಿನಗಳ ಕಾಲ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಕಟ್ಟುಪಾಡುಗಳೊಂದಿಗೆ ಸುಗ್ಗಿ ಉತ್ಸವ ನಡೆಯುತ್ತಿದ್ದು, ಗ್ರಾಮಗಳಲ್ಲಿರುವ ಸುಗ್ಗಿ ಕಟ್ಟೆಯಲ್ಲಿ ಗ್ರಾಮ ದೇವತೆ ಶ್ರೀ ಸಬ್ಬಮ್ಮ ತಾಯಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನೂರಾರು ವರ್ಷಗಳ ಇತಿಹಾಸ ಇರುವ ಸುಗ್ಗಿ ಉತ್ಸವವನ್ನು ಈವರೆಗೂ ಅನೂಚಾನವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಇಂತಹ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಶಾಸಕ ಡಾ. ಮಂತರ್ ಗೌಡ ಅವರು, ಸರ್ಕಾರದಿಂದ ಅನುದಾನ ಒದಗಿಸುವ ಮೂಲಕ ಕ್ಷೇತ್ರಗಳ ಸುಧಾರಣೆಗೆ ಸಹಕಾರ ನೀಡಿದ್ದಾರೆ.

ತಾಲೂಕಿನ ನಗರಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ಕುಮಾರಳ್ಳಿ ಬಾಚಳ್ಳಿ, ಶಾಂತಳ್ಳಿ-ತಲ್ತರೆಶೆಟ್ಟಳ್ಳಿ, ಹಾನಗಲ್ಲು ಶೆಟ್ಟಳ್ಳಿ, ಯಡೂರು, ಚೌಡ್ಲು, ಕೊಡ್ಲಿಪೇಟೆ, ದುಂಡಳ್ಳಿ-ಮಾದ್ರೆ, ವಾಲ್ನೂರು-ತ್ಯಾಗತ್ತೂರು, ತಾಕೇರಿ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ತಲಾ ೧೦ ಲಕ್ಷದಂತೆ ಒಟ್ಟು ೧.೨೦ ಕೋಟಿ ಅನುದಾನ ಒದಗಿಸಿದ್ದು, ಯಡೂರು ಸುಗ್ಗಿ ಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸುಗ್ಗಿ ಕಟ್ಟೆಗಳ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಗ್ರಾಮದ ಹಿರಿಯ-ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪದ್ಧತಿ, ಪರಂಪರೆಗೆ ಧಕ್ಕೆಯಾಗದಂತೆ ಕಾಮಗಾರಿ ನಿರ್ವಹಿಸಬೇಕು. ಶ್ರದ್ಧಾಕೇಂದ್ರಗಳನ್ನು ಉಳಿಸಿ ಬೆಳೆಸುವ ಮೂಲಕ ಸಂಸ್ಕೃತಿಯನ್ನೂ ಪಾಲಿಸಬೇಕೆಂದು ಕಿವಿಮಾತು ಹೇಳಿದರು.

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಸುಗ್ಗಿ ಉತ್ಸವಗಳು ನಡೆಯುತ್ತವೆ. ವಾರ್ಷಿಕವಾಗಿ ಕೆಲವೇ ದಿನಗಳು ಸುಗ್ಗಿ ನಡೆದರೂ ಸಹ, ಇಡೀ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮ ದೇವರನ್ನು ಆರಾಧಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಮೂಲಭೂತ ಸೌಕರ್ಯಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ. ೧.೨೦ ಕೋಟಿಯನ್ನು ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಮೀಸಲಿಟ್ಟು, ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಸುಗ್ಗಿ ಕಟ್ಟೆಗಳ ಅಭಿವೃದ್ಧಿಯ ನೆಪದಲ್ಲಿ ಯಾವುದೇ ಕಾರಣಕ್ಕೂ ಮೂಲಸ್ವರೂಪ, ಪಾವಿತ್ರö್ಯತೆಗಳಿಗೆ ಧಕ್ಕೆಯಾಗಬಾರದು. ಆಧುನಿಕತೆಯೊಂದಿಗೆ ಇತಿಹಾಸದ ಮಿಳಿತವೂ ಇರಬೇಕು. ಪೂರ್ವಿಕರು ಆಚರಿಸಿಕೊಂಡು ಬಂದ ಪದ್ದತಿ, ಪರಂಪರೆ, ಸಂಸ್ಕೃತಿಗಳ ರಕ್ಷಣೆಯಾಗಬೇಕೆಂದು ಅಭಿಮತ ವ್ಯಕ್ತಪಡಿಸಿದ ಶಾಸಕರು, ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ವಿರೋಧ ಪಕ್ಷಗಳು ಸುಖಾಸುಮ್ಮನೆ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ಮಾಡಿದರೆ, ನಾವು ಅಭಿವೃದ್ಧಿಯ ಮೂಲಕ ಜನರ ಮನಸ್ಸು ಗೆಲ್ಲುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಗ್ರಾಮದ ಹಿರಿಯರಾದ ನಾಗರಾಜ್ ಮಾತನಾಡಿ, ಯಡೂರು ಸೇರಿದಂತೆ ಎಲ್ಲಾ ಸುಗ್ಗಿಕಟ್ಟೆಗಳ ಅಭಿವೃದ್ದಿಗೆ ತಲಾ ೧೦ ಲಕ್ಷ ಅನುದಾನ ಒದಗಿಸಿರುವುದು ಶ್ಲಾಘನೀಯ. ಸುಗ್ಗಿ ಕಟ್ಟೆಗಳಿಗೆ ನೂರಾರು ವರ್ಷದ ಇತಿಹಾಸವಿದೆ. ೫೦ ವರ್ಷದ ಹಿಂದೆ ಯಡೂರು ಸುಗ್ಗಿ ಕಟ್ಟೆಯಲ್ಲಿ ಸಂಸ್ಕೃತ ಲಿಪಿ ಲಭಿಸಿದೆ. ಸುಗ್ಗಿ ಕಟ್ಟೆಯ ಅಭಿವೃದ್ಧಿಗೆ ಗ್ರಾಮದವರು ಆದಷ್ಟು ಕೆಲಸ ಮಾಡಿದ್ದೇವೆ. ಇದೀಗ ಸಾಸಕರು ಅಭಿವೃದ್ಧಿಗೆ ಅನುದಾನ ಒದಗಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಈ ಹಿಂದಿನಿAದಲೂ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ಬೇಡಿಕೆ ಇಡಲಾಗಿತ್ತು. ಇದೀಗ ಎಲ್ಲಾ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

ಯಡೂರು ಕೆರೆಯ ಅಭಿವೃದ್ಧಿಗೆ ೫೦ ಲಕ್ಷ ಅನುದಾನ ಒದಗಿಸುವ ಯತ್ನ ಸಾಗುತ್ತಿದೆ. ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತಿದ್ದೇವೆ. ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ ಎಂದರಲ್ಲದೇ, ಕೂಡುರಸ್ತೆಯಿಂದ ಪಟ್ಲದವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಲು ಯೋಜನೆ ರೂಪಿಸಬೇಕಿದೆ ಎಂದು ಶಾಸಕರ ಗಮನ ಸೆಳೆದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಕ್ಷೇತ್ರದ ೨೫೧ ಬೂತ್‌ಗಳಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಈಲ್ಲೆಯ ಇಬ್ಬರೂ ಶಾಸಕರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರುಗಳನ್ನು ಆಯ್ಕೆ ಮಾಡಿದಕ್ಕೆ ಜನರು ಹೆಮ್ಮೆಪಡುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಗೋಪಾಲ್, ನಗರಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಜಗದೀಶ್, ಕೂತಿ ಗ್ರಾಮದ ಕೆ.ಈ. ಜಗದೀಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಶ್, ಹಾನಗಲ್ಲು ಶೆಟ್ಟಳ್ಳಿ ಗ್ರಾಮಾಧ್ಯಕ್ಷ ಉಲ್ಲಾಸ್, ಯಡೂರು ಗ್ರಾಮಾಧ್ಯಕ್ಷ ಮೋಹನ್ ಕುಮಾರ್, ತಲ್ತರೆ ಶೆಟ್ಟಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಜಯಶಂಕರ್, ಚೌಡ್ಲು ವಿ.ಎಸ್.ಎಸ್.ಎನ್. ನಿರ್ದೇಶಕಿ ಜಾನಕಿ ವೆಂಕಟೇಶ್, ಅರ್ಚಕ ಸರ್ವೇಶ್ ಭಟ್ ಅವರುಗಳು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖರಾದ ಪ್ರದೀಪ್, ದಳವಾಯಿ ರಾಜು, ಕಲ್ಕಂದೂರು ರವೀಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.