ಸೋಮವಾರಪೇಟೆ, ಮಾ. ೧೬: ಶಿಕ್ಷಣವೇ ಮಹಿಳೆಯರನ್ನು ಆರ್ಥಿಕ ವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಶಿಕ್ಷಣ ಪಡೆದ ಮಹಿಳೆ ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಸಮಾಜದ ಪ್ರಗತಿಗೂ ಪ್ರಮುಖ ಪಾತ್ರವಹಿಸುತ್ತಾಳೆ ಎಂದು ಬಿಟಿಸಿಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಎಚ್.ಧನಲಕ್ಷೀ ಅಭಿಪ್ರಾಯಿಸಿದರು.
ಕೊಡಗು ಜಿಲ್ಲೆ ಮತ್ತು ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ದಿ.ಸೀತಾಬಾಯಿ ಮತ್ತು ರಾಮಚಂದ್ರ ಕಾಮತ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರತಿಯೊಂದು ಕುಟುಂಬವೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಅತ್ಯಂತ ಮಹತ್ವದ ಕರ್ತವ್ಯವೆಂದು ಪರಿಗಣಿಸಬೇಕು. ಇಂದಿನ ದಿನಗಳಲ್ಲಿ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉನ್ನತ ಶಿಕ್ಷಣ ಪಡೆಯಲು ಕೆಲ ತೊಂದರೆಗಳು ಎದುರಾಗುತ್ತಿವೆ. ಸಾರಿಗೆ, ಆರ್ಥಿಕ ಸಮಸ್ಯೆ ಮತ್ತು ಸಾಮಾಜಿಕ ಮನೋಭಾವನೆಗಳಂತಹ ಅಡೆತಡೆಗಳನ್ನು ನಿವಾರಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಚೀನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿಷಿದ್ಧವಾಗಿತ್ತು. ಮೂಢನಂಬಿಕೆ ಸೇರಿದಂತೆ ಮಹಿಳಾದ್ವೇಷಿ ಪದ್ದತಿ, ಪಟ್ಟಭದ್ರಹಿತಾಸಕ್ತಿಗಳ ಚಿತಾವಣೆಯಿಂದ ಮಹಿಳೆಯರು ಪ್ರಾಣಿಗಳಂತೆ ನಾಲ್ಕು ಗೋಡೆಯ ಮಧ್ಯದಲ್ಲಿ ಬದುಕಬೇಕಿತ್ತು. ಮಧ್ಯಯುಗದಲ್ಲಿ ವಿದೇಶೀಯರ ಆಡಳಿತದಲ್ಲಿ ಮಹಿಳೆಯರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಯಿತು. ಮಹಿಳಾ ಸ್ವತಂತ್ರö ಮತ್ತು ಶಿಕ್ಷಣಕ್ಕೆ ಬ್ರಿಟಿಷ್ ಅಧಿಕಾರಿಗಳ ಮತ್ತು ಸಮಾಜ ಸುಧಾರಕರ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು, ಶಿಕ್ಷಣ ಪಡೆದ ಮಹಿಳೆ ತನ್ನ ಹಕ್ಕುಗಳನ್ನು ಅರಿತು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ. ಮಹಿಳೆಯರು ವಿದ್ಯಾಭ್ಯಾಸದ ಮೂಲಕ ಕಲೆ, ವಿಜ್ಞಾನ, ಸಾಹಿತ್ಯ, ಆಡಳಿತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.
ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶ ನೀಡುವುದು ಕುಟುಂಬದ ಜವಾಬ್ದಾರಿಯಷ್ಟೇ ಅಲ್ಲ, ಅದು ಸಮಾಜದ ನೈತಿಕ ಕರ್ತವ್ಯವೂ ಆಗಿದೆ ಎಂದು ಅವರು ಹೇಳಿದರು. ಕನ್ನಡ ಮಾಧ್ಯಮದಲ್ಲಿ ಪಿಯುಸಿ ಓದಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಆಲೂರು ಸಿದ್ದಾಪುರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪಿ.ಸಿ. ದೀಕ್ಷಿತಾ(ಪ್ರ), ಲಿತಿನಾ(ದ್ವಿ), ಇಶಾಂತ್ ರೆಹಾನ(ತೃ), ಗೀತಗಾಯನ ಸ್ಪರ್ಧೆಯಲ್ಲಿ ಕಿಶೋರ್(ಪ್ರ), ಅಂಜಲಿ(ದ್ವಿ), ಧನ್ಯಾ(ತೃ) ಅವರುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸನಾ ಹರ್ಷ ಮತ್ತು ಕಿಶೋರ್ ಅವರುಗಳು ಕನ್ನಡ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಬೆಂಗಳೂರಿನ ಆರ್.ರಾಜಾರಾವ್, ಸಂಧ್ಯಾಕಾಮತ್, ಕ.ಸಾ.ಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಪ್ರಾಂಶುಪಾಲ ಡಾ.ಬಿ.ಡಿ. ಹರ್ಷ, ಕಸಾಪ ಪದಾಧಿಕಾರಿಗಳಾದ ಎ.ಪಿ. ವೀರರಾಜು, ಜ್ಯೋತಿ ಅರುಣ್, ಎಚ್.ಜೆ. ಜವರಪ್ಪ, ವಾಸುರೈ ಇದ್ದರು.