ಮಡಿಕೇರಿ, ಮಾ. ೧೫: ಲಿಯಾಖತ್ ಆಲಿ ನಿಧನ ಕೊಡಗಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಂಬನಿ ಮಿಡಿದರು.

ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಲಿಯಾಖತ್ ಅಲಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಸ್ಥಾಪಕ ಸದಸ್ಯರಾಗಿ, ಮಡಿಕೇರಿ ಪುರಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಿಯಾಖತ್ ಅಲಿ ಅವರು ಮಡಿಕೇರಿಯಲ್ಲಿ ಕುವೆಂಪು ಪುತ್ಥಳಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಗಾಯನಕ್ಕೆ ಜಾತಿಭೇದವಿಲ್ಲ ಎನ್ನುವುದನ್ನು ತೋರಿಸಿಕೊಟ್ಟವರು ಲಿಯಾಖತ್ ಆಲಿ ಅವರು. ದೇಶಭಕ್ತಿ ಗೀತೆಗಳೊಂದಿಗೆ ದಾಸರ ಪದಗಳನ್ನು ಹಾಡಿ ಗಮನ ಸೆಳೆಯುತ್ತಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷÀ ಟಿ.ಪಿ ರಮೇಶ್ ಮಾತನಾಡಿ, ಲಿಯಾಖತ್ ಆಲಿ ಬಾಲ್ಯದಿಂದಲೂ ಸಾಹಿತ್ಯಾಸಕ್ತಿ, ಗಾಯನ ಪ್ರೇಮ ಹೊಂದಿದ್ದರು. ಅಲ್ಲದೆ ಅವರು ಉತ್ತಮ ನಟರಾಗಿದ್ದರು, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಮಾತನಾಡಿದರು.

ಸಭೆಯಲ್ಲಿ ಕೊಡಗು ಜಿಲ್ಲಾ ಸ್ಕೌಟ್ ಆ್ಯಂಡ್ ಗೈಡ್ಸ್ನ ಆಯುಕ್ತ ಬೇಬಿ ಮ್ಯಾಥ್ಯು, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಸಾಹಿತಿ ಅಲ್ಲಾರಂಡ ವಿಠಲ, ಶಿಕ್ಷಕ ಸುಲೇಮಾನ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ವೇತಾ ರವೀಂದ್ರ, ಜಿ.ಸಿ. ಜಗದೀಶ್, ಶೇಕ್ ಅಹಮದ್, ಆಪಟ್ಟಿರ ಟಾಟು ಮೊಣ್ಣಪ್ಪ, ಪುಷ್ಪ ಪೂಣಚ್ಚ, ತನು ತಿಮ್ಮಯ್ಯ, ಹಂಸ ಕೊಟ್ಟಮುಡಿ, ಖಾಲಿದ್ ಹಾಕತ್ತೂರು, ಖಲೀಲ್ ಭಾಷಾ, ರವುಫ್ ಅಹಮದ್, ಯಾಕುಬ್, ಜಲೀಲ್ ನಾಪೊಕ್ಲು, ರೈತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.