ಚಂದ್ರಮೋಹನ್

ಕುಶಾಲನಗರ, ಮಾ. ೧೪: ಮಾರ್ಚ್ ತಿಂಗಳ ಆರಂಭದಲ್ಲಿಯೇ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ತಿಂಗಳ ಅಂತ್ಯದೊಳಗೆ ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಬಹುತೇಕ ಏರುಪೇರು ಉಂಟಾಗುವ ಸಾಧ್ಯತೆ ಇದೆ.

ಪಟ್ಟಣ ಹಾಗೂ ಗ್ರಾಮಗಳ ವ್ಯಾಪ್ತಿಯ ಸುಮಾರು ೩೫ ಸಾವಿರಕ್ಕೂ ಅಧಿಕ ನಾಗರಿಕರಿಗೆ ಮತ್ತು ಅಗತ್ಯ ಕೇಂದ್ರಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಬೈಚನಹಳ್ಳಿ ಪಂಪ್‌ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಬಂಡ್‌ಗಳನ್ನು ನಿರ್ಮಾಣ ಮಾಡಬೇಕಾದ ಸ್ಥಿತಿ ಎದುರಾಗಲಿದೆ. ಇದೇ ನದಿ ವ್ಯಾಪ್ತಿಯಿಂದ ನೆರೆಯ ಪಿರಿಯಾಪಟ್ಟಣ ನಗರಕ್ಕೂ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಬೈಚನಹಳ್ಳಿ ಬಳಿ ಕಾವೇರಿ ನದಿಯಿಂದ ನೀರು ಸಂಗ್ರಹಿಸಿ ಕುಡಿಯುವ ನೀರು ಸರಬರಾಜು ಮಾಡಲು ಕುಶಾಲನಗರ ನೀರು ಸರಬರಾಜು ಮಂಡಳಿ ಮತ್ತು ಪಿರಿಯಾಪಟ್ಟಣ ಪುರಸಭೆಯ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ. ಮಳೆ ಬೀಳದಿದ್ದಲ್ಲಿ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕುಶಾಲನಗರದಲ್ಲಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ಕರೆದು ತಾಲೂಕಿನ ಪಂಚಾಯಿತಿ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಸಮಗ್ರವಾಗಿ ಮಾಹಿತಿ ಕಲೆ ಹಾಕಿ ಚರ್ಚಿಸಿದ್ದಾರೆ.

೨೦೨೪ರ ಪರಿಸ್ಥಿತಿ ಮತ್ತೆ ಮರುಕಳಿಸುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆಯ ಮುನ್ಸೂಚನೆ ಇರುವುದಾಗಿ ಸೂಚನೆ ನೀಡಿದ್ದಾರೆ. ನದಿ ನೀರಿನ ಪರ್ಯಾಯವಾಗಿ ಕೊಳವೆಬಾವಿಗಳ ದುರಸ್ತಿ ಹಾಗೂ ಹೆಚ್ಚುವರಿ ಕೊಳವೆಬಾವಿಗಳ ಅಗತ್ಯ ಇದ್ದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೈಚನಹಳ್ಳಿ ಪಂಪ್ ಹೌಸ್ ಬಳಿ ಕಾವೇರಿ ನದಿಯಿಂದ ಕುಶಾಲನಗರ ಪಟ್ಟಣಕ್ಕೆ ೬೦ ಅಶ್ವ ಶಕ್ತಿಯ ೨ ಮೋಟರ್ ಪಂಪುಗಳು ದಿನವಿಡೀ ನೀರೆತ್ತಿ ಶುದ್ಧೀಕರಣ ಘಟಕಕ್ಕೆ ಹಾಯಿಸುತ್ತಿವೆ.

ಅತ್ತ ಪಿರಿಯಾಪಟ್ಟಣ ನಗರಕ್ಕೆ ಪಂಪ್ ಹೌಸ್ ಮೂಲಕ ೭೫ ಅಶ್ವ ಶಕ್ತಿಯ ಎರಡು ಪಂಪುಗಳು ದಿನದ ೨೪ ಗಂಟೆಗಳ ಕಾಲ ನೀರು ಎತ್ತುತ್ತಿದ್ದು ಇನ್ನೊಂದೆಡೆ ಭಾರಿ ಅಶ್ವಶಕ್ತಿಯ ಎರಡು ಮೋಟಾರ್ ಪಂಪುಗಳು ಕೊಪ್ಪ ಸೇರಿದಂತೆ ನೆರೆಯ ೧೫ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವ ಮೂಲಕ ಅಗತ್ಯ ಪ್ರಮಾಣದ ನೀರು ಸಂಗ್ರಹ ಹಾಗೂ ಆ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಾಗರಿಕರು ‘ಶಕ್ತಿ’ಯ ಮೂಲಕ ಆಗ್ರಹಿಸಿದ್ದಾರೆ.

ಬಿಸಿಲಿನ ಬೇಗೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನದಿ ತಟದ ಹೊಲ ಗದ್ದೆಗಳಿಗೆ ಕೃಷಿ ಚಟುವಟಿಕೆಗಳಿಗೆ ಭಾರೀ ಪ್ರಮಾಣದ ಅಶ್ವ ಶಕ್ತಿಯ ಮೋಟಾರ್ ಪಂಪುಗಳು ವಾಣಿಜ್ಯ ಕೃಷಿ ಚಟುವಟಿಕೆಗಳಿಗೆ ದಿನದ ೨೪ ಗಂಟೆಗಳ ಕಾಲ ನಿಯಮಬಾಹಿರವಾಗಿ ಕಾವೇರಿ ನದಿಯಿಂದ ನೀರೆತ್ತುವ ಕಾಯಕದಲ್ಲಿ ತೊಡಗಿಕೊಂಡಿರುವ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ಕಾವೇರಿ ನದಿ ತಟದ ಪಟ್ಟಣಗಳು, ಗ್ರಾಮಗಳ ವ್ಯಾಪ್ತಿಯ ನಾಗರಿಕರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವ ಸಾಧ್ಯತೆ ಇದೆ. ಕುಶಾಲನಗರ ಪಟ್ಟಣ ಮತ್ತು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಮೀಪದ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಶೇಕಡ ೮೦ರಷ್ಟು ಪ್ರದೇಶಗಳಿಗೆ ನದಿ ನೀರು ಸರಬರಾಜು ಆಗುತ್ತಿದೆ.

ಕುಶಾಲನಗರ ಪಟ್ಟಣದ ಕೆಲವೆಡೆ ಬಡಾವಣೆಗಳು, ಮುಳ್ಳುಸೋಗೆ, ಗೊಂದಿಬಸವನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ವ್ಯವಸ್ಥೆಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ, ಲಭ್ಯವಿರುವ ಕೊಳವೆಬಾವಿಗಳ ನಿರ್ವಹಣೆ ಕಾಮಗಾರಿ ಕೂಡ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪುರಸಭೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ ಗಿರೀಶ್ ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಶೇಕಡ ೨೦ರಷ್ಟು ಕೊಳವೆಬಾವಿ, ಜಲಜೀವನ್ ಮಿಷನ್ ಮತ್ತಿತರ ವ್ಯವಸ್ಥೆಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಹುತೇಕ ಕ್ಷೀಣ ಗೊಳ್ಳುತ್ತಿದ್ದು, ನದಿಯಲ್ಲಿ ಬಂಡೆಗಳು ಮಾತ್ರ ಗೋಚರಿಸುತ್ತಿವೆ. ೨೦೨೪ರಲ್ಲಿ ಮಾರ್ಚ್ ಆರಂಭದಿAದ ಸುಮಾರು ೭೫ ದಿನಗಳ ಕಾಲ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದುಬಾರೆ ಪ್ರವಾಸಿ ಕೇಂದ್ರದ ಬಳಿ ಕೂಡ ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಬಹುತೇಕ ಕ್ಷೀಣ ಗೊಂಡಿದೆ. ನದಿಯಲ್ಲಿ ರ‍್ಯಾಫ್ಟಿಂಗ್ ಕ್ರೀಡೆ ಕೂಡ ಈಗಾಗಲೇ ಸ್ಥಗಿತಗೊಂಡಿದೆ.

ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ವೇಳೆ ಚಿಕ್ಲಿಹೊಳೆ ಹಾಗೂ ಹಾರಂಗಿ ಅಣೆಕಟ್ಟಿನಿಂದ ನೀರು ನದಿಗೆ ಹರಿಸಿ ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಯೋಜನೆ ರೂಪಿಸುವಲ್ಲಿ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಲು ಶಾಸಕರು ಹಾರಂಗಿ ಅಣೆಕಟ್ಟು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.