ಕಣಿವೆ, ಮಾ. ೧೪: ಕೊಡಗು ಜಿಲ್ಲೆಯ ಮುಖ್ಯ ಧರ್ಮಕ್ಷೇತ್ರಗಳಲ್ಲಿ ಒಂದಾದ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ತಾ. ೨೭ ರಂದು ನಡೆಯಲಿದೆ.

ಜೀವನದಿ ಕಾವೇರಿ ಹಾರಂಗಿಯೊAದಿಗೆ ಸಮ್ಮಿಳಿತಗೊಂಡು ಉತ್ತರಾಭಿಮುಖವಾಗಿ ಹರಿಯುವ ಪುಣ್ಯ ಸ್ಥಳದಲ್ಲಿ ಇರುವ ಈ ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ.

ಕೊಡಗು ರಾಜ್ಯವಾಗಿದ್ದ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಈ ಕಣಿವೆ ಗ್ರಾಮ ಉತ್ತರ ಕೊಡಗು ಹಾಗೂ ನೆರೆಯ ಮೈಸೂರು ಜಿಲ್ಲೆಯ ಗಡಿ ಪ್ರದೇಶಗಳ ಅನೇಕ ಗ್ರಾಮಗಳ ಮುಖ್ಯ ವಾಣಿಜ್ಯ ವ್ಯವಹಾರ ಕೇಂದ್ರವಾಗಿತ್ತು.

ಹಿAದೂಗಳು, ಮುಸಲ್ಮಾನರು ಹಾಗೂ ಕ್ರೈಸ್ತರು ನೆಲೆಸಿದ್ದ ಈ ಗ್ರಾಮದಲ್ಲಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಇಡೀ ಊರಿಗೆ ಊರೇ ಜಾತಿ, ಧರ್ಮ, ಭಾಷೆಗಳನ್ನೂ ಮೀರಿದ ಸಾಮರಸ್ಯ ಹಾಗೂ ಸೌಹಾರ್ದ ನೆಲೆಗೊಂಡ ಗ್ರಾಮವಾಗಿದೆ ಕಣಿವೆ. ಸ್ವಾಭಾವಿಕವಾಗಿ ಗುಡ್ಡ ಹಾಗೂ ಬೆಟ್ಟ ಪ್ರದೇಶದಿಂದ ಕೂಡಿದ್ದ ಈ ಗ್ರಾಮಕ್ಕೆ ಸಹಜವಾಗಿಯೇ ಕಣಿವೆ ಎಂಬ ಹೆಸರು ಬಂದಿತ್ತು.

ಮೈಸೂರು ಜಿಲ್ಲೆಯ ಭತ್ತದ ಕಣಜಕ್ಕೆ ಮೂಲ ಸೇತುವಾದ ಕಣಿವೆ

ಗುಡ್ಡ ಪ್ರದೇಶದ ಕಣಿವೆಯಂತಹ ತಗ್ಗು ಪ್ರದೇಶವನ್ನು ಸೀಳಿ ಸಾಗಿರುವ ಈ ಕಣಿವೆಯ ಎರಡು ಗುಡ್ಡಗಳನ್ನು ತಾಗಿಸಿ ಹಾರಂಗಿ ಬಲದಂಡೆ ಮುಖ್ಯ ನಾಲೆಯನ್ನು ಪೂರ್ಣವಾಗಿ ಕಬ್ಬಿಣ ಹಾಗೂ ಕಾಂಕ್ರೀಟ್ ನಿಂದ ನಿರ್ಮಿಸಿದ ಪರಿಣಾಮ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಕೆ.ಆರ್.ನಗರ ತಾಲೂಕುಗಳ ನೂರಾರು ಗ್ರಾಮಗಳು ಭತ್ತದ ಕಣಜವಾಗಿ ಮಾರ್ಪಟ್ಟಿದೆ.

ದೇವಾಲಯದ ಎಡ ಹಾಗೂ ಬಲ ಬದಿಗಳ ಗುಡ್ಡದ ಮೇಲೆ ಹಾರಂಗಿ ನಾಲೆಯ ಅಕ್ವೆಡಕ್ಟ್ ಹಾಗೂ ಲಕ್ಷ್ಮಣೇಶ್ವರ ಹಾಗೂ ಹರಿಹರೇಶ್ವರ ದೇವಾಲಯಗಳಿದ್ದು ಭಕ್ತರನ್ನು ಆಕರ್ಷಿಸುತ್ತಿವೆ.

ಕಣಿವೆಯಲ್ಲಿ ಎಂದೂ ಬತ್ತದ ಕಾವೇರಿ

ಬೇಸಿಗೆಯಲ್ಲಿ ಬಿಸಿಲ ತಾಪಕ್ಕೆ ಕಾವೇರಿ ನದಿ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ತನ್ನ ಹರಿವು ಸ್ಥಗಿತಗೊಳಿಸಿದರೂ ಕೂಡ ಐತಿಹ್ಯದ ಈ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಯಾವತ್ತೂ ಕಾವೇರಿ ನದಿ ಬತ್ತಿರುವ ಇತಿಹಾಸವೇ ಇಲ್ಲ. ಲೋಕ ಪಾವನೆ ಕಾವೇರಿ ದೇವಾಲಯದ ಸನ್ನಿಧಿಯಲ್ಲಿ ಆವಿರ್ಭವಿಸಿ ಹರಿಯುತ್ತಾ ಜೀವಕೋಟಿಗಳ ಸಲಹುತ್ತಿದ್ದಾಳೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ನಿವೃತ್ತ ಕರ್ನಲ್ ಆರ್.ಕೆ. ನಾರಾಯಣ ಮೂರ್ತಿ.

ಕಳೆದ ಎಳೆಂಟು ವರ್ಷಗಳ ಈಚೆಗೆ ಆಗಿಂದಾಗ್ಗೆ ಮಳೆಗಾಲದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದೂ ದೇವಾಲಯದ ಮೇಲ್ಬದಿಯ ಮೆಟ್ಟಿಲುಗಳ ವರೆಗೆ ಹರಿದು ಶ್ರೀ ರಾಮನೇ ಖುದ್ದು ಪ್ರತಿಷ್ಠಾಪಿಸಿದ ಎನ್ನಲಾದ ಶಿವಲಿಂಗದ ದರ್ಶನ ಪಡೆದು ಮುಂದೆ ಸಾಗಿ ನಾಡನ್ನು ಶ್ರೀಮಂತಗೊಳಿಸುತ್ತಿದ್ದಾಳೆ ಕಾವೇರಿ ಎಂಬುದು ಭಕ್ತರ ನಂಬಿಕೆ. ಇದೇ ಮಾರ್ಚ್ ತಿಂಗಳ ತಾ.೨೭ ರ ಶುಕ್ರವಾರ ದೇವರ ರಥೋತ್ಸವ ಜರುಗಲಿದ್ದು ಬಿಸಿಲನ್ನು ಲೆಕ್ಕಿಸದೇ ಭಕ್ತ ಸಾಗರವೇ ಸೇರಿ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ರಥವು ಒಂದಷ್ಟು ದುರಸ್ತಿ ಇದ್ದು ಅದನ್ನು ಸರಿಮಾಡಲಾಗುತ್ತಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್ ಸುರೇಶ್ ಹೇಳುತ್ತಾರೆ.

-ಕೆ.ಎಸ್ ಮೂರ್ತಿ