ನಾಪೋಕ್ಲು, ಮಾ.೧೪: ಇಂದಿನ ಕಾಲಘಟ್ಟದಲ್ಲಿ ಮಹಿಳೆ ಪಾಲಕರಾಗಿ, ರಕ್ಷಕರಾಗಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾಳೆ. ಕೌಟುಂಬಿಕ ನಿರ್ವಹಣೆ ಸೇರಿದಂತೆ ಔದ್ಯೋಗಿಕ ರಂಗದಲ್ಲಿಯೂ ಮಹಿಳೆ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲಳು ಎಂದು ಚೆಟ್ಟಿಮಾನಿ ಗ್ರಾಮದ ನಿವೃತ್ತ ಪ್ರಾಧ್ಯಾಪಕಿ ಸುಳ್ಯಕೋಡಿ ಶಿವದೇವಿ ಅವನಿಶ್ಚಂದ್ರ ಅಭಿಪ್ರಾಯಪಟ್ಟರು.

ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಚೇರಂಬಾಣೆಯ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಇಂದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ತನಗೆ ವಹಿಸಿದ ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ತ್ಯಾಗಮಯಿ ಜೀವನ ಸ್ಮರಣೀಯ ಎಂದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ, ಭಾಷೆ ಒಂದು ಜನಾಂಗದ ಅಸ್ತಿತ್ವಕ್ಕೆ ಮೂಲವಾಗಿದೆ. ಭಾಷೆ ಬಿಟ್ಟರೆ ಸಂಸ್ಕೃತಿ ನಾಶವಾದಂತೆ. ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬAಧವಿದ್ದು ಒಂದು ಸಮಾಜ ಅವೆರಡನ್ನು ದೂರ ಮಾಡಿದಲ್ಲಿ ನಾಗರಿಕತೆ ಅವಸಾನವಾದಂತೆ ಎಂದರು.

ಇAತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಂತೋಷವಾಗಿ ಪಾಲ್ಗೊಳ್ಳಬೇಕು. ಮೊದಲ ವರ್ಷದ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂಬರುವ ವರ್ಷಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್ ಬೆಂಕಿ ಇಲ್ಲದ ಅಡುಗೆ ಪದಾರ್ಥಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮಕ್ಕಳಾಗಿ, ಅಮ್ಮನಾಗಿ, ಗುರುವಾಗಿ ಎಲ್ಲ ರಂಗದಲ್ಲೂ ಮಹಿಳೆ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾಳೆ ಎಂದರು. ಮೂಢನಂಬಿಕೆ ಹಾಗೂ ಗೊಡ್ಡು ಸಾಂಪ್ರದಾಯವನ್ನು ಮೆಟ್ಟಿನಿಂತು ಸಮಾಜದ ಉನ್ನತಿಗೆ ಎಲ್ಲರೂ ಕೈಜೋಡಿಸುವಂತಾಗಬೇಕೆAದರು. ಒಕ್ಕೂಟದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವರ್ಷ ತುಂಬುವ ಈ ಸಂದರ್ಭ ಒಟ್ಟು ಸುಮಾರು ೪೨ ವಿವಿಧ ಕಾರ್ಯಕ್ರಮಗಳನ್ನು ಪೂರೈಸಿದ್ದೇವೆ. ಈ ಶ್ರೇಯಸ್ಸಿಗೆ ಎಲ್ಲರ ಸಹಕಾರವೇ ಮುಖ್ಯ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಕರಕುಶಲ ವಸ್ತು ಪ್ರದರ್ಶನವನ್ನು ಕುಶಾಲನಗರದ ಗೌಡ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಕಲಾ ಆನಂದ್ ಕರಂದ್ಲಾಜೆ ಉದ್ಘಾಟಿಸಿದರು. ಮಹಿಳೆಯರಿಂದ ಸಿದ್ಧಪಡಿಸಿದ ಕರಕುಶಲ ವಸ್ತುಗಳ ಮತ್ತು ಖಾದ್ಯ ಪದಾರ್ಥಗಳ ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಲತಾ ಮೊಣ್ಣಪ್ಪ ನೆರವೇರಿಸಿದರು. ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆಯನ್ನು ಕಾರುಗುಂದ ಗೌಡ ಸಮಾಜದ ನಿರ್ದೇಶಕಿ ಹೇಮಲತಾ ತಾರೇಂದ್ರ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಉಪಾಧ್ಯಕ್ಷೆ ಕೋರನ ಸುಶೀಲಾ ಅಪ್ಪಾಜಿ, ಬೆಂಗಳೂರಿನ ಗೌಡ ಯುವ ವೇದಿಕೆಯ ಅಧ್ಯಕ್ಷ ತಳೂರು ಮಮತಾ ಹಿತೇಶ್, ಪದ್ಮಾವತಿ ಗೌಡ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ , ಮಕ್ಕಂದೂರು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೇರ ರೀಟಾ ಜಯಪ್ರಕಾಶ್, ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಚಿಂತು, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಹ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಮತ್ತು ನಿರ್ದೇಶಕರುಗಳು ಹಾಜರಿದ್ದರು.