ಕಣಿವೆ, ಮಾ. ೧೪: ಆನೆ-ಮಾನವ ಸಂಘರ್ಷ ಹಿನ್ನೆಲೆ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಕಾವೇರಿ ನಿಸರ್ಗಧಾಮದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳಿಂದ ಆಗುತ್ತಿರುವ ಬೆಳೆ ಹಾನಿ ಹಾಗೂ ಜೀವ ಹಾನಿ ತಪ್ಪಿಸಲು ಕಾಡಾನೆಗಳ ನಿಗ್ರಹಕ್ಕೆ ವಿಶೇಷವಾದ ಯೋಜನೆಗಳನ್ನು ರೂಪಿಸಬೇಕು.

ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ರೈತರೊಂದಿಗೆ ಮುಕ್ತ ಸಂವಾದದ ಮೂಲಕ ಜಿಲ್ಲೆಯಲ್ಲಿ ಕಾಡಾನೆಗಳಿಂದ ಆಗುತ್ತಿರುವ ಉಪಟಳದ ಬಗ್ಗೆ ಅರಣ್ಯ ಮಂತ್ರಿಗಳು ಅರಿಯಲು ಖುದ್ದಾಗಿ ಅರಣ್ಯ ಮಂತ್ರಿ ಈಶ್ವರ ಖಂಡ್ರೆಯವರನ್ನು ಜಿಲ್ಲೆಗೆ ಆಹ್ವಾನಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಕಳೆದ ಕೆಲವೇ ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ನಾಲ್ಕು ಅಮಾಯಕ ಜೀವಗಳು ಕಾಡಾನೆ ದಾಳಿಗೆ ಬಲಿಯಾಗಿವೆ. ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಕಾಡಾನೆಗಳ ನಿತ್ಯ ಸಂಚಾರ ಇರುವ ಕಡೆಗಳಲ್ಲಿ ಅವುಗಳ ಚಲನವಲನ ಗಮನಿಸಿ ಜನರ ಜೀವ ಕಾಪಾಡಲು ಕೂಡಲೇ ಇಲಾಖೆ ಕಾರ್ಯೋನ್ಮುಖವಾಗಬೇಕು. ಪ್ರತ್ಯೇಕ ತಂಡಗಳನ್ನು ರಚಿಸಬೇಕು ಎಂದು ನಿರ್ದೇಶನ ನೀಡಿದರು.

ಕೊಡಗು ಜಿಲ್ಲೆಯಲ್ಲಿನ ದುಬಾರೆ, ಆನೆಕಾಡು, ಕಾಜೂರು, ಸಿದ್ದಾಪುರ ಮೊದಲಾದ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುವಲ್ಲಿ ಕಾಡಾನೆಗಳ ಕಾರಿಡಾರ್ ಅತೀ ಅಗತ್ಯವಾಗಿದೆ. ಕಾರಿಡಾರ್‌ಗಳು ವಿಸ್ತಾರಗೊಂಡಷ್ಟು ಆನೆ ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕಾಡAಚಿನ ರೈತರು ಕೂಡ ತಾವು ಸಾಕಿರುವ ಜಾನುವಾರುಗಳನ್ನು ಕಾಡಿಗೆ ಅಟ್ಟದೇ ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಶಾಸಕರು ಹೇಳಿದರು. ಕಾಡಾನೆಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಆಹಾರದ ಗಿಡ ಮರಗಳು ಕಾಡಿನಲ್ಲಿ ಇಲ್ಲ. ಕೇವಲ ತೇಗ, ಬೀಟೆಯಂತಹ ಮರಗಳನ್ನು ಬೆಳೆಸಿದ್ದೀರಿ. ಕಾಡಾನೆಗಳಿಗೆ ಪೂರಕವಾದಂತಹ ಹಲಸು, ಬಿದಿರು, ಆಲ, ಅರಳಿ ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಹಮ್ಮಿಕೊಳ್ಳಬೇಕು. ಹಾಗೆಯೇ ಅರಣ್ಯದಲ್ಲಿ ನೀರಿನ ಅಭಾವ ಇರುವ ಕಡೆ ಕೊಳವೆ ಬಾವಿಗಳನ್ನು ತೋಡಿ ಕಟ್ಟೆಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಿ ಕುಡಿಯಲು ವ್ಯವಸ್ಥೆ ಮಾಡಬೇಕು ಎಂದು ಮಂತರಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ಕಾವೇರಿ ನದಿಯ ಪ್ರವಾಹದಿಂದ ದುಬಾರೆಯ ಗಿರಿಜನರು ಹಾಗೂ ಸಾಕಾನೆಗಳ ಮಾವುತರ ಸಂಚಾರಕ್ಕೆ ಆಗುತ್ತಿದ್ದ ಸಮಸ್ಯೆ ನೀಗಿಸಲು ರೂ.೮ ಕೋಟಿ ವೆಚ್ಚದಲ್ಲಿ ತೂಗುಸೇತುವೆ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಶಾಸಕರು ವಿವರಿಸಿದರು. ಸಭೆಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವೃಷ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್, ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ಸಹಾಯಕ ವಲಯ ಅರಣ್ಯಾಧಿಕಾರಿ ಚರಣ್ ಇದ್ದರು.