ಗೋಣಿಕೊಪ್ಪಲು, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಯ ದಾಳಿಯಿಂದಾಗಿ ಇತ್ತೀಚೆಗೆ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತೇವೆ. ಆನೆ ಮಾನವ ಸಂಘರ್ಷ ತಡೆಯಲು ಎಲ್ಲರ ಪ್ರಯತ್ನವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜಕೀಯವನ್ನು ಬದಿಗಿಟ್ಟು ಆನೆ ಮಾನವ ಸಂಘರ್ಷ ತಡೆಯಲು ನಾವೆಲ್ಲರೂ ಪಣತೊಡಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಕೊಲ್ಲಿರ ಬೋಪಣ್ಣ, ಕಾಂಗ್ರೆಸ್ ಜಿಲ್ಲಾ ವಕ್ತಾರ ಆಪಟ್ಟಿರ ಟಾಟೂ ಮೊಣ್ಣಪ್ಪ ತಿಳಿಸಿದ್ದಾರೆ.

ಗೋಣಿಕೊಪ್ಪಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಆನೆ ಹಾವಳಿಯ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಕಳೆದ ೨೫ ವರ್ಷಗಳಿಂದಲೂ ಸಂಘರ್ಷಗಳು ಮುಂದುವರೆಯುತ್ತಲೇ ಇದೆ.

ಇದಕ್ಕಾಗಿ ಶಾಶ್ವತ ಪರಿಹಾರ ತರಲು ಕ್ಷೇತ್ರದ ಶಾಸಕ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಶ್ರಮಿಸುತ್ತಿದ್ದಾರೆ. ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಬಿಜೆಪಿ ಪಕ್ಷದÀವರು ಆನೆ ಮಾನವ ಸಂಘರ್ಷ ವಿಚಾರವನ್ನು ಮುಂದಿಟ್ಟುಕೊAಡು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದರೆ, ಇಲ್ಲಿ ಶಾಸಕರ ವಿರುದ್ಧ ಘೋಷಣೆಗಳನ್ನು ನಾವುಗಳು ಖಂಡಿಸುತ್ತೇವೆ. ಪ್ರತಿಭಟನೆ ಬದಲಾಗಿ ಸಂಸದರಿಗೆ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಆನೆ ಮಾನವ ಸಂಘರ್ಷ ತಡೆಯಲು ಬೇಕಾದ ಕ್ರಮ ಹಾಗೂ ಅನುದಾನವನ್ನು ತರುವ ಪ್ರಯತ್ನ ಮಾಡಬೇಕೆಂದು ಬೋಪಣ್ಣ ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಪೊನ್ನಣ್ಣನವರ ಮೇಲೆ ದಿಕ್ಕಾರದ ಘೋಷಣೆಗಳನ್ನು ಕೂಗುವುದು ಎಷ್ಟು ಸರಿ.? ಶಾಸಕ ಪೊನ್ನಣ್ಣನವರು ಆನೆ ಮಾನವ ಸಂಘರ್ಷದ ವಿಚಾರದಲ್ಲಿ ವಿಧಾನ ಸಭೆಯಲ್ಲಿಯೇ ಗಮನ ಸೆಳೆಯುವ ಮೂಲಕ ಇಲ್ಲಿನ ಗಂಭೀರತೆಯನ್ನು ಮಂತ್ರಿಗಳಿಗೆ ಮನವರಿಕೆ ಮಾಡಿದ್ದಾರೆ. ಪುಂಡಾನೆಯನ್ನು ಸೆರೆ ಹಿಡಿಯಲು ತಕ್ಷಣವೇ ಅನುಮತಿಯನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಈ ಹಿಂದೆ ೨೦ ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಜಿ.ಬೋಪಯ್ಯ ಅವರು ಆನೆ ಮಾನವ ಸಂಘರ್ಷ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಜನರ ಮುಂದೆ ಇಡುವಂತೆ ಈ ವೇಳೆ ಆಗ್ರಹಿಸಿದರು.

ಆನೆ ಮಾನವ ಸಂಘರ್ಷದ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಹುದೊಡ್ಡ ಜವಾಬ್ದಾರಿ ಇದೆ. ಕ್ಷೇತ್ರದ ಸಂಸದರ ಪಾಲು ಕೂಡ ಅಧಿಕವಿದೆ. ಸಂಸದರ ನಿಲುವನ್ನು ಸ್ಪಷ್ಟ ಪಡಿಸುವಂತೆ ಒತ್ತಾಯಿಸಿದರು. ವಿವಿಧ ಘಟನೆಗಳಲ್ಲಿ ಶಾಸಕ ಪೊನ್ನಣ್ಣನವರು ನೊಂದ ಕುಟುಂಬದ ಮನೆಗೆ ತೆರಳಿ ಸಾಂತ್ವನ ಹೇಳುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಿದ್ದಾರೆ. ಸಕಾಲದಲ್ಲಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ.

ಹಂತ ಹಂತವಾಗಿ ಆನೆ ಮಾನವ ಸಂಘರ್ಷ ತಡೆಯಲು ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ ಬಿಜೆಪಿಗರು ಕೊಡಗಿನ ಶಾಸಕರ ಮೇಲೆ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎ.ಜೆ.ಬಾಬು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣಿರ ಹರೀಶ್ ಉಪಸ್ಥಿತರಿದ್ದರು.