ಸುಂಟಿಕೊಪ್ಪ, ಮಾ.೧೪: ಹಾರಂಗಿ ಜಲಾಶಯದ ಹಿನ್ನೀರಿನ ಹೇರೂರು ಗ್ರಾಮದಲ್ಲಿ ತಮಿಳುನಾಡು ಮೂಲದ ವಿದ್ಯಾರ್ಥಿಯೋರ್ವ ನೀರಿಗಿಳಿದು ಮೇಲೆ ಬರಲಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಶನಿವಾರದಂದು ಬೆಳಿಗ್ಗೆ ತಮಿಳುನಾಡು ರಾಜ್ಯದ ನಿವಾಸಿ ಪ್ರಸ್ತುತ ಬೆಂಗಳೂರು ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ (೨೨) ಎಂಬಾತ ತನ್ನ ಕಾಲೇಜಿನ ತಂಡದೊAದಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದು, ಬೆಳಿಗ್ಗೆ ಹೇರೂರಿನಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ವೀಕ್ಷಣೆಗೆ ಈ ತಂಡ ತೆರಳಿತ್ತು. ಈ ವೇಳೆ ಸುದರ್ಶನ್ ನೀರಿಗೆ ಇಳಿದಿದ್ದು, ನಂತರ ಮೇಲಕ್ಕೆ ಬರಲಾಗದೆ ಸಾವಿಗೀಡಾಗಿದ್ದಾನೆ.
ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಮುಳುಗು ತಜ್ಞರು, ಪೊಲೀಸರು, ದುಬಾರೆ ರ್ಯಾಪ್ಟಿಂಗ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುAಟಿಕೊಪ್ಪ ಹೋಬಳಿಯ ಹಾದ್ರೆ ಮತ್ತು ಹೇರೂರು ಗ್ರಾಮವು ಹಾರಂಗಿ ಹಿನ್ನೀರು ಒಳಗೊಂಡ ಅದ್ಭುತವಾದ ಪ್ರವಾಸಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಾಣವಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಈ ಪ್ರದೇಶದ ಬಗ್ಗೆ ಗಮನಹರಿಸದೆ ಇರುವುದರಿಂದ ಈ ತಾಣ ಪ್ರವಾಸಿಗರ ಜೀವಕ್ಕೆ ಮೃತ್ಯುಕೂಪವಾಗುತ್ತಿದೆ. ಪ್ರವಾಸಿಗರು ಈ ಪರಿಸರದ ಆಳ ಹರಿವಿನ ಪರಿಜ್ಞಾನ ಇಲ್ಲದೆ ಈಜಲು ತೆರಳಿದ ಸಂದರ್ಭ ಸುಳಿ ಹಾಗೂ ಕೆಸರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಹಿ ಘಟನೆಗಳು ಸಂಭವಿಸಿದಾಗ ಅಧಿಕಾರಿಗಳು ಆಗಮಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡುತ್ತಾರೆ ಹೊರತು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ.
ಪ್ರವಾಸಿಗರಿಗೆ ಮಾಹಿತಿ ನೀಡಲು ೨ ಸೂಚನಾ ಫಲಕಗಳನ್ನು ಮಾತ್ರ ಅಳವಡಿಸಲಾಗಿದೆ. ಆದರೆ ಪ್ರವಾಸಿಗರಿಗೆ ನೀರಿಗಿಳಿಯದಂತೆ ಜಾಗೃತಿ ಮೂಡಿಸುವ ಹಾಗೂ ನೀರಿಗಳಿದರೆ ಸಂಭವಿಸುವ ಅನಾಹುತಗಳ ಬಗ್ಗೆ ಮಾಹಿತಿ ಫಲಕಗಳನ್ನು ಇಲ್ಲಿ ಅಳವಡಿಸಬೇಕಿದೆ. ಅನಾಹುತಗಳು ಸಂಭವಿಸಿದಾಗ ತಕ್ಷಣ ಕಾರ್ಯಾಚರಣೆ ನಡೆಸಲು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ ಎಂಬುದು ಪ್ರವಾಸಿಗರ ಹಾಗೂ ಸ್ಥಳೀಯರ ಆಗ್ರಹವಾಗಿದೆ.