ವೀರಾಜಪೇಟೆ, ಮಾ. ೧೩: ವೀರಾಜಪೇಟೆಯ ವಿಜಯನಗರದಲ್ಲಿರುವ ಪುಟಾಣಿ ಮಕ್ಕಳ ಚೋಟ ಚಾಂಪ್ಸ್ ಗುರುಕುಲಂ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣರ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಸ್ಥಾಪಕರಾದ ಅಜಯ್ ನಾರಾಯಣ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೊದಲು ದೇಶದಲ್ಲಿ ಕೂಡು ಕುಟುಂಬದ ಸದಸ್ಯರು ಇದ್ದಾಗ ಮಕ್ಕಳಲ್ಲಿ ಗುರು - ಹಿರಿಯರು ಸಂಸ್ಕಾರ ಹೇಳಿಕೊಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೂಡುಕುಟುಂಬ ಮಾಯವಾಗಿದೆ. ಆದುದರಿಂದ ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು. ಮಕ್ಕಳಿಗೆ ಮುಖ್ಯವಾಗಿ ಸಂಸ್ಕಾರ ಬೇಕಾಗುತ್ತದೆ ಎಂದರು.

ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಯಾವುದೇ ಜಾತಿಯ ಅಥವಾ ರಾಜಕೀಯ ವಿಷಯಗಳ ಬಗ್ಗೆ ವಿಷ ಬೀಜಗಳನ್ನು ಬಿತ್ತಬಾರದು. ಪೋಷಕರು ಮಕ್ಕಳಿಗೆ ಆಚಾರ ವಿಚಾರ, ಸಂಸ್ಕೃತಿ ಸಂಸ್ಕಾರವನ್ನು ಕಲಿಸುವಂತಾಗಬೇಕು ಎಂದರು.

ಚೋಟ ಚಾಂಪ್ಸ್" ಗುರುಕುಲಂನ ಮುಖ್ಯಸ್ಥರಾದ ಧನು ಕುಮಾರ್ ಮಾತನಾಡಿ, ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ನೀಡುವುದು, ಶಾಲೆಯಲ್ಲಿ ಅಕ್ಷರ ಜ್ಞಾನ ಬಿತ್ತುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಚೋಟ ಚಾಂಪ್ಸ್ ಶಾಲೆಯ ಪ್ರಾಂಶುಪಾಲರಾದ ಚಂಗೇಟಿರ ಅಕ್ಕಮ್ಮ ಧನುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಉತ್ತಮ ನಡೆ-ನುಡಿ ಹಾಗೂ ಸಂಸ್ಕಾರವನ್ನು ಕಲಿಸುವ ಉದ್ದೇಶದಿಂದ ಶಾಲೆಯನ್ನು ಆರಂಭಿಲಾಗಿದೆ ಎಂದರು.

ಹಳೆಯ ಕಾಲದ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹ ಮಾಡಿರುವ ಅಜಯ್ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಂತರ ಶಾಲೆಯ ಪುಟ್ಟ ಮಕ್ಕಳ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಗುರುಕುಲಂ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.