ವೀರಾಜಪೇಟೆ, ಮಾ. ೧೩: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಬೋಯಿಕೇರಿ-ಕೆದಮುಳ್ಳೂರು ಮಾರ್ಗವಾಗಿ ಪಾಲಂಗಾಲ-ಕರಡಕ್ಕೆ ತೆರಳುವ ಮುಖ್ಯರಸ್ತೆ ಮಾರ್ಗದ ಸುಮಾರು ನಾಲ್ಕೂವರೆ ಕಿಮೀ ರಸ್ತೆಯನ್ನು ಕೊಟ್ಟೋಳಿಯ ಧಾರಮಹೇಶ್ವರ ದೇವಾಲಯದ ಸಮೀಪ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಲೋಕಾರ್ಪಣೆ ಮಾಡಿದರು.

ಶಾಸಕರ ವಿಶೇಷ ಅನುದಾನ ರೂ.೧ ಕೋಟಿ ೩೦ ಲಕ್ಷದಲ್ಲಿ ಪುನರ್ ನಿರ್ಮಾಣಗೊಂಡ ಲೋಕೋಪಯೋಗಿ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು, ವೀರಾಜಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅಧಿಕ ಅನುದಾನವನ್ನು ಸರಕಾರ ಒದಗಿಸಿದೆ. ಮಳೆ ನಿಂತ ಮೇಲೆ ರಸ್ತೆಯ ಕಾಮಗಾರಿ ನಡೆಯುತ್ತದೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದೆ. ಅದರಂತೆ ರಸ್ತೆಯ ಕಾಮಗಾರಿ ಆರಂಭಗೊAಡಿದೆ. ವೀರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಆದುದರಿಂದ ಆ ಕಾಮಗಾರಿ ಮುಗಿಯುವ ತನಕ ರಸ್ತೆಯ ಕಾಮಗಾರಿ ಮಾಡಬೇಡಿ ಎಂದು ತಿಳಿಸಿದ್ದೇನೆ. ಒಂದು ವೇಳೆ ಕಾಮಗಾರಿ ಮಾಡಿದರೆ ಆ ರಸ್ತೆ ಕಾಮಗಾರಿ ಗುಣಮಟ್ಟದಿಂದ ಇರುವುದಿಲ್ಲ. ವೀರಾಜಪೇಟೆಯಿಂದ ಮಡಿಕೇರಿವರೆಗೆ ನೂತನ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತದೆ. ಈ ವರ್ಷ ಮಳೆಗಾಲ ಆರಂಭಕ್ಕೆ ಮುನ್ನ ಎಷ್ಟು ಸಾಧ್ಯವೋ ಅಷ್ಟು ಕಾಮಗಾರಿ ನಡೆಯುತ್ತದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಇಸ್ಮಾಯಿಲ್ ಮಾತನಾಡಿ, ಸಾರ್ವಜನಿಕರ ಬೇಡಿಕೆ ಮೇರೆಗೆ ಶಾಸಕರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನೂತನ ರಸ್ತೆಗೆ ಹಣವನ್ನು ಬಿಡುಗಡೆ ಗೊಳಿಸಿದ್ದಾರೆ ಎಂದರು.

ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಕೆದಮುಳ್ಳೂರು ಪಂಚಾಯಿತಿ. ಈ ಭಾಗದಲ್ಲಿ ಇಪ್ಪತ್ತು ವರ್ಷಗಳಿಂದ ಆಗದ ಕಾಮಗಾರಿಯನ್ನು ಕೇವಲ ಮೂರು ವರ್ಷಗಳಲ್ಲಿ ನಮ್ಮ ಸರಕಾರ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಕೆದಮುಳ್ಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಜಫ್ರಿ ಉತ್ತಪ್ಪ, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಪೆಮ್ಮಂಡ ಮಂಜು ಬೋಪಣ್ಣ, ಬೂತ್ ಅಧ್ಯಕ್ಷರುಗಳು, ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು ಹಾಜರಿದ್ದರು.