ಪೊನ್ನಂಪೇಟೆ, ಮಾ. ೧೧: ಪೊನ್ನಂಪೇಟೆ ತಾಲೂಕಿನ ಅರ್ವ ತೊಕ್ಲುವಿನಲ್ಲಿರುವ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ.೧೪ ಹಾಗೂ ೧೫ ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಪ್ರೀತ್ ಪೂಣಚ್ಚ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವರ್ಷಂಪ್ರತಿ ನಡೆಯುವಂತೆ ಈ ವರ್ಷವೂ ಮಾರ್ಚ್ ತಿಂಗಳಲ್ಲಿ ಹಬ್ಬ ನಡೆಯಲಿದ್ದು, ಈಗಾಗಲೇ ಹಬ್ಬದ ಕಟ್ಟು ಬಿದ್ದಿದ್ದು, ಹಲವಾರು ಕಟ್ಟುಪಾಡುಗಳನ್ನು ಊರಿನಲ್ಲಿ ಪಾಲಿಸಲಾಗುತ್ತಿದೆ. ತಾ.೧೫ ರಂದು ಬೆಳಿಗ್ಗೆ ೭.೩೦ ಕ್ಕೆ ಬೆಂಕಿ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಒಂದು ದಿನ ಮುಂಚಿತವಾಗಿ ತಾ.೧೪ ರಂದು ಸಂಜೆ ೫ ಗಂಟೆಗೆ ಕಾಡ್ಯಮಾಡ ಕುಟುಂಬದ ಐನ್ ಮನೆಯಿಂದ ಭಂಡಾರ ಇಳಿಯುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ.

ನಂತರ ತಾ. ೧೪ ರಂದು ಸಂಜೆ ೬ ಗಂಟೆಗೆ ಹಬ್ಬದ ಕಟ್ಟು ಮುರಿಯುವ ಮೂಲಕ ಮನೆ ಮನೆ ಕಳಿ ಹೊರಡಲಿದೆ. ರಾತ್ರಿ೧೧ ಗಂಟೆಗೆ ಕಾಡ್ಯಮಾಡ ಐನ್ ಮನೆಯಿಂದ ಪೊಲವಪ್ಪ ಇಳಿಯುವುದು. ತಾ.೧೪ ರ ರಾತ್ರಿಯಿಂದ ತಾ. ೧೫ ರ ಬೆಳಿಗ್ಗೆಯವರೆಗೂ ವಿವಿಧ ಪೂಜಾ ವಿಧಿ ವಿಧಾನಗಳು ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿವೆ. ತಾ. ೧೫ ರಂದು ಬೆಳಿಗ್ಗೆ ೭.೩೦ ರಿಂದ ೮ ಗಂಟೆಯ ಸಮಯದಲ್ಲಿ ಶ್ರೀ ಕಾಡ್ಲಯ್ಯಪ್ಪ ದೇವಸ್ಥಾನದ ಸಮೀಪವಿರುವ ಬೆಂಕಿ ಕೊಂಡವನ್ನು ಆವೇಶ ಭರಿತ ವ್ಯಕ್ತಿ ಹಾಯ್ದ ನಂತರ ಸ್ಥಳೀಯರು ಕೂಡ ಬೆಂಕಿ ಕೊಂಡವನ್ನು ಹಾಯುತ್ತಾರೆ. ನಂತರ ಕಾಡ್ಲಯ್ಯಪ್ಪ ದೇವಸ್ಥಾನದಲ್ಲಿ ವಿವಿಧ ಆಚರಣೆ ಹಾಗೂ ಪೂಜಾ ವಿಧಿ ವಿಧಾನಗಳು ನಡೆದು ಭಕ್ತರು ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ನಂತರ ರಾತ್ರಿ ೭ ಗಂಟೆಗೆ ಅಜ್ಜಪ್ಪನ ಸ್ಥಾನದಲ್ಲಿ ಜಮ್ಮಡ ಕುಟುಂಬದವರು ಕಲಜ ಕೊಡುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದ್ದಾರೆ.