ಸಿದ್ದಾಪುರ, ಮಾ.೧೨; ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಸಂಭವಿಸಿದೆ. ಗುಹ್ಯ ಗ್ರಾಮದ ನಿವಾಸಿ ಚೌರಿರ ಡಿ. ಗಣಪತಿ ಎಂಬವರೇ ಮೃತ ದುರ್ದೈವಿ.
ಗುಹ್ಯ ಗ್ರಾಮದ ನಿವಾಸಿ ಗಣಪತಿ (ಗಪ್ಪು-೪೯) ಎಂಬವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಲೆಂದು ಪೂರ್ವಾಹ್ನ ೧೧ ಗಂಟೆ ಸಮಯಕ್ಕೆ ಕಾಫಿ ತೋಟದೊಳಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಒಂಟಿ ಸಲಗವೊಂದು ದಾಳಿ ನಡೆಸಿದೆ. ಗಣಪತಿಯವರು ಕಾಡಾನೆಯ ದಾಳಿಯಿಂದ ತಪ್ಪಿಸಲು ಓಡಲು ಯತ್ನಿಸಿದಾಗ ಸಲಗವು ಗಣಪತಿಯವರನ್ನು ತಲೆ, ಎದೆ, ಕಾಲಿಗೆ ತುಳಿದು ಸ್ಥಳದಲ್ಲೇ ಕೊಂದುಹಾಕಿದೆ. ನಂತರ ಘೀಳಿಟ್ಟ ಸಂದರ್ಭ ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಕರಿಮೆಣಸು ಕೆಲಸ ಮಾಡುತ್ತಿದ್ದ ಕಾರ್ಮಿಕರು ಮರವನ್ನೇರಿ ದಾಳಿಯಿಂದ ತಪ್ಪಿಸಿ ಪಾರಾಗಿದ್ದಾರೆ. ಓಡುವ ಸಂದರ್ಭ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನೌಷಾದ್ ಎಂಬವರು ಕಾಲು ಜಾರಿ ಬಿದ್ದು ಕಾಲಿಗೆ ನೋವು ಉಂಟಾಗಿದೆ. ಹಾಡಹಗಲೇ ಕಾಡಾನೆ ದಾಳಿ ನಡೆಸಿ ಕೊಂದುಹಾಕಿದ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಎದುರಾಯಿತು. ಈ ವಿಚಾರ ತಿಳಿದು ಗ್ರಾಮಸ್ಥರು ತಂಡೋಪತAಡವಾಗಿ ಆಗಮಿಸಿದರು. ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಸಿಬ್ಬಂದಿಗಳು ತಕ್ಷಣ ಆಗಮಿಸಿದರು. ಬಳಿಕ ಮೃತ ದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ತರಲಾಯಿತು. ಮೃತಪಟ್ಟ ಗಣಪತಿಯವರು ಅವಿವಾಹಿತರಾಗಿದ್ದು, ಕುಶಾಲನಗರ ಭಾಗದಲ್ಲಿ ಖಾಸಗಿ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು.
ಒಂಟಿಸಲಗ ಗುಹ್ಯ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಹಗಲಿನ ವೇಳೆಯೂ ಸಂಚರಿಸುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಇಲಾಖೆ ವಿರುದ್ಧ ಪ್ರತಿಭಟನೆ
ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳಗಾರ ಗಣಪತಿಯವರು ಮೃತಪಟ್ಟ ವಿಚಾರ ತಿಳಿದು ಶವಾಗಾರದ ಬಳಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬರುವವರೆಗೂ ಮೃತದೇಹವನ್ನು ಶವಾಗಾರದಿಂದ ತೆಗೆಯುವುದಿಲ್ಲ ಎಂದು ಪಟ್ಟುಹಿಡಿದರು. ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅರಣ್ಯ ಇಲಾಖೆಯ ನಿರ್ಲಕ್ಷತನದಿಂದ ಘಟನೆ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಕಾಡಾನೆಗಳು ನಾಡಿಗೆ ಬರದಂತೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಬರಮಾಡಿಕೊಂಡರು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ)
ಅಧಿಕಾರಿ ಭೇಟಿ
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವೃಷ್ಣಿ ಅವರು ಮೃತದೇಹವನ್ನು ವೀಕ್ಷಿಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಳೆದ ೬೬ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ೪ ಮಂದಿ ಸಾವನ್ನಪ್ಪಿದ್ದಾರೆ. ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ಕಾಡಾನೆ ದಾಳಿಗೆ ಸಿಲುಕಿ ಕಳೆದ ಎರಡು ದಿನಗಳ ಅಂತರದಲ್ಲಿ ಎರಡು ಮಂದಿ ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕೇವಲ ಘಟನೆ ನಡೆದ ಸಂದರ್ಭದಲ್ಲಿ ಪರಿಹಾರ ನೀಡಿ ಇಲಾಖೆ ಕೈತೊಳೆದುಕೊಳ್ಳುತ್ತಿದೆ. ಅದು ಬಿಟ್ಟರೆ ಶಾಶ್ವತ ಯೋಜನೆಯನ್ನು ರೂಪಿಸದೆ ನಿರ್ಲಕ್ಷö್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕಾಡಾನೆಗಳ ಉಪಟಳವನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನಡೆಸಲು ಸರ್ಕಾರ ಮುಂದಾಗಿದೆ. ಆದರೆ ಇದು ಅವೈಜ್ಞಾನಿಕವಾಗಿದ್ದು ಇದರಿಂದಾಗಿ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ನಿರಂತರ ಆನೆ ಮಾನವ ಸಂಘರ್ಷ ನಡೆಯುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಾವು ಈವರೆಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಉತ್ತರಿಸಿ ಎಂದು ಸಿ.ಸಿ.ಎಫ್ ಅವರನ್ನು ಪ್ರಶ್ನಿಸಿದರು. ವನ್ಯಪ್ರಾಣಿಗಳ ಹಾವಳಿ ಜಿಲ್ಲೆಯಲ್ಲಿ ಮಿತಿಮೀರಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ಮಾತನಾಡಿ, ಸರ್ಕಾರದ ವತಿಯಿಂದ ಕಾಡಾನೆಗಳ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಆದರೆ ಇವರ ಮಾತಿಗೆ ಮನ್ನಣೆ ನೀಡದ ಪ್ರತಿಭಟನಾಕಾರರು ಅರಣ್ಯ ಇಲಾಖೆಯಿಂದ ಕಾಡಾನೆಗಳ ಉಪಟಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ನೀಡುವಂತೆ ಆಗ್ರಹಿಸಿದರು.
ರೂ. ೧ ಕೋಟಿ ಪರಿಹಾರಕ್ಕೆ ಒತ್ತಾಯ
ಕಾಡಾನೆ ದಾಳಿಗೆ ಸಿಲುಕಿ ಯುವಕ ಮೃತಪಟ್ಟಿದ್ದು, ಈತನ ಕುಟುಂಬಕ್ಕೆ ರೂ.೧ ಕೋಟಿ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಸಿ.ಸಿ.ಎಫ್. ಅವರಲ್ಲಿ ಒತ್ತಾಯಿಸಿದರು. ಮೃತಪಟ್ಟ ಕುಟುಂಬಕ್ಕೆ ಕೇವಲ ೨೦ ಲಕ್ಷ ನೀಡಿ ಪ್ರಯೋಜನವಿಲ್ಲ, ಒಂದು ಕೋಟಿ ಹಣವನ್ನು ನೀಡುವಂತೆ ಒತ್ತಾಯಿಸಿದರು.
ಇಲಾಖೆ ವಿರುದ್ಧ ಎಫ್.ಐ.ಆರ್.ಗೆ ಆಗ್ರಹ
ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳಗಾರ ಸಾವನ್ನಪ್ಪಿದ ಘಟನೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯತನದಿಂದ ಸಂಭವಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ಅರಣ್ಯ ಇಲಾಖೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಕರಣ ದಾಖಲಾಗುವವರೆಗೂ ಮೃತದೇಹವನ್ನು ಶವಾಗಾರದಿಂದ ತೆಗೆಯುವುದಿಲ್ಲ, ಅರಣ್ಯ ಇಲಾಖೆಗಳ ನಿರ್ಲಕ್ಷö್ಯತನದಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಇಲಾಖೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡದಿದ್ದಲ್ಲಿ ಮೃತದೇಹವನ್ನು ರಸ್ತೆ ಬದಿಯಲ್ಲಿಟ್ಟು ಪ್ರತಿಭಟನೆ ನಡೆಸಲಾಗುವುದೆಂದು ಪೊಲೀಸರ ಬಳಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾಡಾನೆಗಳನ್ನು ನಿಯಂತ್ರಣಕ್ಕೆ ತರದ ಅರಣ್ಯ ಇಲಾಖೆ ಬೆಳಗಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಪ್ರಕರಣದ ದಾಖಲಿಸುತ್ತಿದೆ ಎಂದು ಬೆಳಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆ ವಿರುದ್ಧ ದೂರು
ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರ ಗಣಪತಿ ಸಾವನ್ನಪ್ಪಿರುವ ಘಟನೆ ಅರಣ್ಯ ಇಲಾಖೆಯ ನಿರ್ಲಕ್ಷö್ಯತನದಿಂದ ಸಂಭವಿಸಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರರಾದ ಕೆ.ಬಿ. ಹೇಮಚಂದ್ರ ಅವರ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಗೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಇತ್ತೀಚೆಗೆ ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾಮದ ಬಳಿ ಕಾಲೇಜು ವಿದ್ಯಾರ್ಥಿನಿ ಹಾಗೂ ವಾಲ್ನೂರು ಗ್ರಾಮದಲ್ಲಿ ಮಹಿಳೆ, ಹುಂಡಿ ನಿವಾಸಿ ಅಬ್ದುಲ್ ಲತೀಫ್ ಹಾಗೂ ಗುರುವಾರದಂದು ಗಣಪತಿಯವರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಲು ಕಾರಣ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ಮತ್ತು ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ತಿತಿಮತಿ ವಲಯ ಹಾಗೂ ವಿರಾಜಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ ಸುಭಾಷ್ ಸುಬ್ಬಯ್ಯ. ಕಾರ್ಯದರ್ಶಿ ಸುಜಯ್, ಹಾಗೂ ಪದಾಧಿಕಾರಿಗಳಾದ ಅಜಿತ್ ಪೂಣಚ್ಚ, ಸಜೀವನ್, ದೇವಣಿರ ಬೋಪಣ್ಣ ಹಾಜರಿದ್ದರು. ಇದಲ್ಲದೆ ಕಾರ್ಮಿಕ ಸಂಘಟನೆಯ ಪ್ರಮುಖರಾದ ಭರತ್ ಹಾಗೂ ರಮೇಶ್ ಅವರು ಕೂಡ ಕಾರ್ಮಿಕ ಸಂಘಟನೆ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ಸಂದರ್ಭ ಮಾಜಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ ಬೋಪಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಚಲನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಕಾರ್ಮಿಕ ಸಂಘಟನೆ ಮುಖಂಡರಗಳಾದ ಬಲ್ಲಾರಂಡ ಮಣಿ ಉತ್ತಪ್ಪ, ಭರತ್, ರಮೇಶ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಹಾಗೂ ಬಿಜೆಪಿ ವಿರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರಂಬಯ್ಯ ಹಾಗೂ ಇನ್ನಿತರರು ಹಾಜರಿದ್ದರು.
ಅರಣ್ಯ ಇಲಾಖೆಯ ಎ.ಸಿ.ಎಫ್.ಗಳಾದ, ತಸ್ಮಿಂ ಬಾನು, ಗೋಪಾಲ್, ವಲಯ ಅರಣ್ಯ ಅಧಿಕಾರಿಗಳಾದ ಶಿವರಾಂ, ಗಂಗಾಧರ್, ಮಡಿಕೇರಿ ವಿಭಾಗದ ಡಿವೈಎಸ್ಪಿ ಸೂರಜ್, ಹಾಗೂ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಠಾಣಾಧಿಕಾರಿಗಳು, ಸಿಬ್ಬಂದಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದರು.
ಚಿತ್ರ, ವರದಿ: ಎ.ಎನ್. ವಾಸು