ಗೋಣಿಕೊಪ್ಪಲು, ಮಾ. ೧೩: ದಕ್ಷಿಣ ಕೊಡಗಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕೆಸೂಡ್ಲೂರು-ಕಾನೂರು ಮುಖ್ಯ ರಸ್ತೆಯಲ್ಲಿ ಮುಂಜಾನೆ ವೇಳೆಯಲ್ಲಿ ಕಂಟೇನರ್ ಲಾರಿಯೊಂದು ಮಗುಚಿಕೊಂಡಿದ್ದು ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಪಾರಾಗಿದ್ದಾನೆ.

ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಸರಕು ತುಂಬಿದ ಲಾರಿ ಬೆಕ್ಕೆಸೊಡ್ಲೂರು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ಮಂದತವ್ವ ದೇವಾಲಯಕ್ಕೆ ತೆರಳುವ ಮುಖ್ಯದ್ವಾರದಲ್ಲಿ ಅಳವಡಿಸಲಾಗಿರುವ ಕಮಾನಿಗೆ ಹಾಗೂ ಸಮೀಪದ ಬಸ್ಸು ಪ್ರಯಾಣಿಕರ ತಂಗುದಾಣಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಘಟನೆಯಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಈ ರಸ್ತೆಯು ತೀರ ತಿರುವಿನಿಂದ ಕೂಡಿದ್ದು, ಈ ಮಾರ್ಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಕೇರಳಕ್ಕೆ ಸಂಚರಿಸುತ್ತಿವೆ. ತಿರುವಿನಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಾಗಿದೆ.

ರಸ್ತೆ ತಿರುವಿನಲ್ಲಿ ರಸ್ತೆ ಅಪಘಾತದ ಸೂಚನಾ ಫಲಕಗಳನ್ನು ಅಳವಡಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.