ಮಡಿಕೇರಿ, ಮಾ. ೧೨: ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ಬೇಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೭೫ ವರ್ಷಗಳ ಸಂಭ್ರಮದಲ್ಲಿದ್ದು, ಏಪ್ರಿಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕೇಚಟ್ಟಿರ ಅರುಣ್ ಅಪ್ಪಣ್ಣ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೧೦, ೧೧ ಹಾಗೂ ೧೨ ರಂದು ಬೇಗೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಏ. ೧೦ ರಂದು ಗ್ರಾಮದಲ್ಲಿರುವ ಕುಟುಂಬಗಳ ನಡುವೆ ೫ ಎ ಸೈಡ್ ಹಾಕಿ ಪಂದ್ಯ, ಗ್ರಾಮದ ಪುರುಷ ಹಾಗೂ ಮಹಿಳೆಯರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಏ. ೧೧ ರಂದು ಗ್ರಾಮದಲ್ಲಿ ಮೆರಥಾನ್ ಆಯೋಜಿಸಲಾಗಿದೆ. ಪುರುಷ ಮತ್ತು ಮಹಿಳೆಯರ ವಿಭಾಗದ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಲಿದ್ದು, ವಿಜೇತರಿಗೆ ರೂ. ೩೦ ಸಾವಿರ ನಗದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೨೦ ಸಾವಿರ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧೫ ಸಾವಿರ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಕ್ಕೆ ಮಾ. ೩೧ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ ಮೊ. ೯೪೮೩೯೧೪೪೬೦, ೮೧೬೨೧೩೫೫೮೭ ಅಥವಾ ೭೪೮೩೩೯೯೯೭೬ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದರು.

ತಾ. ೧೧ ರ ಸಂಜೆ ಕೋಳೇರ ಸನ್ನು ಕಾವೇರಪ್ಪ ತಂಡದಿAದ ಕೊಡವ ನಾಟಕ ಪ್ರದರ್ಶನ ನಡೆಯಲಿದ್ದು, ತಾ. ೧೨ ರಂದು ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆ, ಹಾಕಿ ಫೈನಲ್ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕರ್ನಾಟಕ ಚೀಫ್ ಎಲೆಕ್ಟಿçಕ್ ಆಫೀಸರ್ ತೀತಿರ ರೋಶನ್ ಅಪ್ಪಚ್ಚು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಗ್ರಾಮದ ಸೈನಿಕರು, ನಿವೃತ್ತ ಸೈನಿಕರನ್ನು ಸನ್ಮಾನಿಸಲಾಗುತ್ತದೆ. ಸಮಾರಂಭದ ನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ರಾತ್ರಿ ಸರಿಗಮಪ ಖ್ಯಾತಿಯ ಅನ್ವಿತ್ ತಂಡದಿAದ ರಸಮಂಜರಿ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕಾಯಪಂಡ ಕಂಠಿ ಕರುಂಬಯ್ಯ, ಕೇಚಟ್ಟಿರ ಲಲಿತ, ಕಾರ್ಯದರ್ಶಿ ಮತ್ರಂಡ ರಾಜ ಮುತ್ತಪ್ಪ, ಸದಸ್ಯರುಗಳಾದ ಕೊಟ್ಟಂಗಡ ರಾಜಾ ಸುಬ್ಬಯ್ಯ, ಮತ್ರಂಡ ಮಿತ್ರ ಹಾಜರಿದ್ದರು.