ಸೋಮವಾರಪೇಟೆ.ಮಾ.೧೦: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಚಿತ್ರಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ವಿಶ್ವದ ಹೃದಯದ ಹೆಣ್ಣೇ-ನಿನಗೊಂದು ನಮನ’ ಕಾರ್ಯಕ್ರಮದಲ್ಲಿ ತಾಲೂಕಿನ ಶನಿವಾರಸಂತೆಯ ಲೇಖಕಿ ಲಾವಣ್ಯ ಮೋಹನ್ ಅವರಿಗೆ ವೀರ ವನಿತೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಚಲನಚಿತ್ರ ನಟಿ ತಾರ ಅನುರಾಧ ಸೇರಿದಂತೆ ಚಿತ್ರ ಸಂತೆಯ ಅಧ್ಯಕ್ಷ ಗಿರೀಶ್, ನಿವೃತ್ತ ಯೋಧ ಗುರುರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಇತ್ತೀಚೆಗೆ ಜರುಗಿದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕವನ ಸಂಕಲನ ‘ಪುಷ್ಕರಣಿ’ ಬಿಡುಗಡೆಯಾಗಿದೆ. ಸಾಮಾಜಿಕವಾಗಿಯೂ ಹಲವಷ್ಟು ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಲಾವಣ್ಯ ಮೋಹನ್ ಅವರ ಸಾಹಿತ್ಯ ಕ್ಷೇತ್ರಕ್ಕೆ ಈ ಗೌರವ ಲಭಿಸಿದೆ.