ಸೋಮವಾರಪೇಟೆ,ಮಾ.೧೦: ೨೦೨೬-೨೭ನೇ ಸಾಲಿಗೆ ಸಂಬAಧಿಸಿದAತೆ ಇಲ್ಲಿನ ಪಟ್ಟಣ ಪಂಚಾಯಿತಿಯು ರೂ. ೧.೮೨ ಲಕ್ಷ ಉಳಿತಾಯ ಬಜೆಟ್ ಮಂಡಿಸಿದೆ.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಬಜೆಟ್ ಮಂಡಿಸಿದರು. ನಂತರ ಮಾತನಾಡಿದ ಅವರು. ಪಟ್ಟಣದ ಸಮಗ್ರ ಅಭಿವೃದ್ಧಿಯ ಯೋಜನೆಯನ್ನು ಹಾಕಿಕೊಂಡು ಈ ಬಾರಿಯ ಬಜೆಟ್ ಮಾಡಲಾಗಿದೆ ಎಂದರು.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ೮.೩೩ ಚ.ಕಿ.ಮೀ ವಿಸ್ತೀರ್ಣದ ವ್ಯಾಪ್ತಿ ಹೊಂದಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ ಬೀದಿದೀಪ ವ್ಯವಸ್ಥೆ ಇವೆಲ್ಲವು ಹೆಚ್ಚು-ಹೆಚ್ಚಾಗಿ ಹಾಗೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಆಗಬೇಕಾಗಿದೆ ಎಂದರು.

ಸಾರ್ವಜನಿಕರಿಗೆ ಅತ್ಯುತ್ತಮ ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಿದೆ. ಇದಕ್ಕಾಗಿ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ, ಬೇರೆ ಮೂಲಗಳಿಂದ ಅನುದಾನ ಪಡೆದು ಅಭಿವೃದ್ಧಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.

ಪಂಚಾಯಿತಿಗೆ ಬರುವ ಆದಾಯಗಳಲ್ಲಿ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ, ಮಾರುಕಟ್ಟೆ ಬಾಡಿಗೆಗಳು ಹಾಗೂ ಇತರೆ ಶುಲ್ಕ ಮತ್ತು ಸರ್ಕಾರದಿಂದ ಬಿಡುಗಡೆ ಆಗುವ ಅನುದಾನಗಳಾದ ಎಸ್.ಎಫ್.ಸಿ. ೧೬ನೇ ಹಣಕಾಸು, ಅಮೃತ್ ಮಿತ್ರ ನಗರೋತ್ಥಾನ ಯೋಜನೆಯ ಅನುದಾನ ಪ್ರಮುಖವಾಗಿವೆ. ಇವೆಲ್ಲವನ್ನು ಅಂದಾಜಿಸಿಕೊAಡು, ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ, ನೀರು ವಿತರಣಾ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಕಸ ವಿಲೇವಾರಿ ವ್ಯವಸ್ಥೆ ಮತ್ತು ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿಯಲ್ಲಿ ೨೦೨೬-೨೭ನೇ ಸಾಲಿನಲ್ಲಿ ವೇತನ ಅನುದಾನ ರೂ. ೧೫೧ ಲಕ್ಷ, ವಿದ್ಯುತ್ ಅನುದಾನ ರೂ. ೧೭೫ ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ರೂ ೬೫ ಲಕ್ಷ, ವಿಶೇಷ ಅನುದಾನ ರೂ. ೧೦೦ ಲಕ್ಷ, ೧೫ನೇ ಹಣಕಾಸು ಅನುದಾನ ರೂ. ೫೦ ಲಕ್ಷ, ೧೬ನೇ ಹಣಕಾಸು ಅನುದಾನ ರೂ. ೧೦೦ ಲಕ್ಷ, ಕಚೇರಿ ಕಟ್ಟಡ ನಿರ್ಮಾಣ ವೆಚ್ಚ ರೂ. ೩೦೦ ಲಕ್ಷ, ಮುಖ್ಯಮಂತ್ರಿಗಳ ಅನುದಾನ ರೂ. ೧೦೦ ಲಕ್ಷ ಸೇರಿದಂತೆ ಒಟ್ಟು ೧,೩೬೮.೧೨ ಲಕ್ಷ ಆದಾಯ ನಿರೀಕ್ಷಿಸಲಾಗಿದೆ ಎಂದು ಕೃಷ್ಣಮೂರ್ತಿ ಹೇಳಿದರು.

ವೇತನ ಅನುದಾನ ಖರ್ಚು ರೂ. ೧೫೧ ಲಕ್ಷ, ನೀರು ಮತ್ತು ವಿದ್ಯುತ್ ಅನುದಾನ ಖರ್ಚು ರೂ. ೧೭೫ ಲಕ್ಷ, ನೈರ್ಮಲ್ಯ ಹೊರಗುತ್ತಿಗೆ ವೆಚ್ಚ ರೂ. ೨೫ ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ನೌಕರರ ವೆಚ್ಚ ರೂ. ೨೦ ಲಕ್ಷ, ವಾಣಿಜ್ಯ ಮಳಿಗೆ ರಿಪೇರಿ ವೆಚ್ಚ ರೂ. ೩೦ ಲಕ್ಷ, ಪೇ ಮತ್ತು ಪಾರ್ಕಿಂಗ್ ಕಟ್ಟಡದ ವೆಚ್ಚ ರೂ. ೮೦ ಲಕ್ಷ, ಕಚೇರಿಯ ಉಪಕರಣ ಖರೀದಿ ವೆಚ್ಚ ರೂ. ೩ ಲಕ್ಷ, ಗೃಹ ಭಾಗ್ಯ ವೆಚ್ಚ ರೂ. ೨೩ ಲಕ್ಷ ಸೇರಿದಂತೆ ರೂ. ೧,೩೬೬.೩೦ ಲಕ್ಷ ವೆಚ್ಚ ನಿರೀಕ್ಷಿಸಲಾಗಿದ್ದು, ರೂ. ೧.೮೨ ಲಕ್ಷ ಉಳಿತಾಯ ಆದಾಯದ ಬಜೆಟ್ ಮಂಡಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎರಡು ಪಾರ್ಕ್ಗಳನ್ನು ನಿರ್ವಹಣೆ ಮಾಡಲು ಈ ಬಾರಿ ೧೬ನೇ ಹಣಕಾಸಿನ ಅಮೃತ್ ಯೋಜನೆಯಲ್ಲಿ ರೂ. ೧೦ ಲಕ್ಷ ಮೀಸಲಿರಿಸಲಾಗಿದೆ. ಪಟ್ಟಣ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಮುಂದುವರೆದಿದ್ದು, ಪ್ರಸಕ್ತ ಸಾಲಿನ ಮೇ ತಿಂಗಳಿನಲ್ಲಿ ಸಿದ್ಧಲಿಂಗಪುರದಲ್ಲಿ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ಲೋಕಾರ್ಪಣೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಸಭೆಯಲ್ಲಿ ಪಂಚಾಯಿತಿ ಇಂಜಿನಿಯರ್ ಹೇಮಕುಮಾರ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಪಂಚಾಯಿತಿ ಅಕೌಂಟೆAಟ್ ಭಾವನ, ವಿಷಯ ಸಂಗ್ರಹಕಿ ರೂಪ, ಸಿಬ್ಬಂದಿಗಳಾದ ಜೀವನ್‌ಕುಮಾರ್, ವನಿತಾ ಇದ್ದರು.