ಸಿದ್ದಾಪುರ, ಮಾ. ೧೦: ಸೋಮವಾರದಂದು ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ ಅವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಯ ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಲಾಷ್ ಹಾಗೂ ಎ.ಸಿ.ಎಫ್. ಗೋಪಾಲ್ ಎ.ಎ. ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ನೇತೃತ್ವದಲ್ಲಿ ಕಳೆದೆರಡು ದಿನಗಳಿಂದ ಮೀನುಕೊಲ್ಲಿ ಅರಣ್ಯ ಶಾಖಾ ವ್ಯಾಪ್ತಿಗೆ ಒಳಪಡುವ ಬಾಳೆಗುಂಡಿ ಮತ್ತು ನಂಜರಾಯಪಟ್ಟಣ ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಈ ಭಾಗದಲ್ಲಿ ಅರಣ್ಯ ಪ್ರದೇಶ ಇರುವ ಹಿನ್ನೆಲೆಯಲ್ಲಿ ಯಾವ ಕಾಡಾನೆ ಮಹಿಳೆಯನ್ನು ಹತ್ಯೆ ಮಾಡಿದೆ ಎಂದು ಅರಣ್ಯ ಇಲಾಖೆಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಕಾಡಾನೆ ದಾಳಿ ನಡೆಸುವ ಸಂದರ್ಭ ಸಾವನ್ನಪ್ಪಿದ ಮಹಿಳೆಯೊಂದಿಗೆ ಇದ್ದ ಇತರರು ಭಯದಿಂದ ದಿಕ್ಕು ಪಾಲಾಗಿ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಕೂಡ ಆನೆಯನ್ನು ಸಮರ್ಪಕವಾಗಿ ಗುರುತಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇದೀಗ ಈ ಭಾಗದಲ್ಲಿ ಪುಂಡಾಟಿಕೆ ಮಾಡುವ ಆನೆ ಆಗಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಭಾಗದಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.