ಸಿದ್ದಾಪುರ, ಮಾ. ೧೦: ಚೆನ್ನಯ್ಯನಕೋಟೆ ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಿದರು. ಈ ಸಂದರ್ಭದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಮೀರಾ ಗುಂಪಿನ ಮರಿಯಾನೆ ಸೇರಿದಂತೆ ೮ಕ್ಕೂ ಅಧಿಕ ಕಾಡಾನೆಗಳನ್ನು ತಿತಿಮತಿ ವ್ಯಾಪ್ತಿಯ ಅಬ್ಬೂರ್ಕಟ್ಟೆ ಗೇಟ್ ಮೂಲಕ ದೇವಮಚ್ಚಿ ಮೀಸಲು ಅರಣ್ಯಕ್ಕೆ ಅಟ್ಟಲಾಯಿತು.
ಕಾಡಿನತ್ತ ತೆರಳಿರುವ ಕಾಡಾನೆಗಳು ಮರಳಿ ನಾಡಿನತ್ತ ಬರದಂತೆ ತಿತಿಮತಿ ಅರಣ್ಯ ವ್ಯಾಪ್ತಿಯ ಅಬ್ಬೂರುಕಟ್ಟೆ ಗೇಟ್ ಬಳಿ ರಾತ್ರಿ ಸಮಯದಲ್ಲಿ ಗಸ್ತು ತಿರುಗಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ. ಜಿಲ್ಲಾ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಹಾಗೂ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡದ ಉಪ ವಲಯ ಅರಣ್ಯ ಅಧಿಕಾರಿಗಳಾದ ದೇವರಾಜ್, ಚನ್ನ ವೀರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.