ಐಗೂರು, ಮಾ. ೧೦: ಐಗೂರು ವ್ಯಾಪ್ತಿಯ ವಿಜಯನಗರದ ಜನವಸತಿ ಪ್ರದೇಶಕ್ಕೆ ಕಾಡಾನೆ ನುಗ್ಗಿ ದಾಂಧಲೆ ನಡೆಸಿ ನಷ್ಟ ಉಂಟು ಮಾಡಿದ ಘಟನೆ ನಡೆದಿದೆ.
ಬೆಳಗ್ಗಿನ ಜಾವ ಸುಮಾರು ೬.೧೫ ಗಂಟೆಗೆ ಸ್ಥಳೀಯ ವಿಜಯನಗರದ ನಿವಾಸಿ ಗೋಪಿ ಎಂಬವರ ಮನೆಯ ಹಿಂಭಾಗದ ಅರಣ್ಯದಿಂದ ಬಂದ ಕಾಡಾನೆಯು ಗೋಪಿ ಅವರ ಮನೆಯ ಪಕ್ಕದಲ್ಲಿ ನಿರ್ಮಿಸಿದ್ದ ಸೌದೆ ಕೊಟ್ಟಿಗೆಗೆ ಹಾನಿ ಮಾಡಿದೆ. ಆನೆ ದಾಳಿ ನಡೆದ ಸಂದರ್ಭ ಗೋಪಿ ಮನೆಯವರು ಮತ್ತು ಅಕ್ಕಪಕ್ಕದ ಮನೆಯ ನಿವಾಸಿಗಳಾದ ಬಾಬು ಮತ್ತು ಸತೀಶ ಎಂಬುವವರು ಭಯಭೀತರಾಗಿ ದೃಶ್ಯವನ್ನು ಮನೆಯೊಳಗಿನಿಂದಲೇ ನೋಡಿದ್ದಾರೆ.
ಆನೆ ದಾಳಿಯಿಂದ ಭಯಭೀತರಾದ ವಿಜಯನಗರ ನಿವಾಸಿಗಳು ಕೂಲಿ ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಮುತ್ತಪ್ಪ, ಅರಣ್ಯ ಇಲಾಖೆಯ ಗಸ್ತು ಪಡೆಯ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಸುಕುಮಾರ್.