ವೀರಾಜಪೇಟೆ, ಮಾ. ೧೦: ವೀರಾಜಪೇಟೆ ಪುರಸಭೆಯಲ್ಲಿ ಮುಖ್ಯರಸ್ತೆಯ ಬದಿಗಳಲ್ಲಿರುವ ಕಟ್ಟಡದವರಿಗೆ ಕಾನೂನು ರೀತಿಯ ಪರಿಹಾರಕ್ಕಾಗಿ ಮತ್ತು ಹಲವು ಮಂಡನೆಗಳ ಅಂಗೀಕಾರಕ್ಕೆ ಒತ್ತಾಯಿಸಿ ವೀರಾಜಪೇಟೆ ಪುರಸಭೆ ಕಛೇರಿಯ ಮುಂದೆ ತಾ.೧೨ ರಂದು ಸಾರ್ವಜನಿಕರೊಡಗೂಡಿ ಒತ್ತಾಯ ಮಾಡುವುದಾಗಿ ಸಮಿತಿ ತೀರ್ಮಾನಿಸಿದೆ ಎಂದು ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ಸಂಚಾಲಕ ಡಾ. ಇ.ರಾ. ದುರ್ಗಾಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ರಸ್ತೆಯ ಎರಡು ಬದಿಗಳಲ್ಲಿರುವ ಕಟ್ಟಡ, ಮನೆ ಮಾಲೀಕರುಗಳಿಗೆ ಪರಿಹಾರ ಕೊಟ್ಟು ಜಾಗಗಳನ್ನು ಪಡೆದು ಮುಖ್ಯ ರಸ್ತೆಯನ್ನು ತಕ್ಷಣವೇ ಅಗಲೀಕರಿಸಬೇಕೆಂದು ಒತ್ತಾಯಿಸಿ ಮತ್ತು ಮಂಡಿಸಲ್ಪಟ್ಟಿರುವ ಹಲವು ಬೇಡಿಕೆಗಳ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು.
ಮುಖ್ಯ ರಸ್ತೆಯಲ್ಲಿ ಮಾಡುತ್ತಿರುವ ಕೆಲಸಗಳ ಯೋಜನೆಯ ಸಂಪೂರ್ಣ ವಿವರಗಳನ್ನು ಜನರ ಮುಂದೆ ಮಂಡಿಸಬೇಕು. ವೀರಾಜಪೇಟೆಯ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿರುವ ಕಟ್ಟಡ, ಮನೆ ಮಾಲೀಕರುಗಳಿಗೆ ಕಾನೂನು ರೀತಿಯಲ್ಲಿ ಪರಿಹಾರ ಕೊಡಬೇಕು ಎಂದು ಈ ಸಂದರ್ಭ ಆಗ್ರಹಿಸಲಾಗುವುದೆಂದು ಅವರು ತಿಳಿಸಿದ್ದಾರೆ.