ಕುಶಾಲನಗರ, ಮಾ. ೧೦: ಕಳೆದ ಎರಡು ವರ್ಷಗಳಿಂದ ಕಾರಣಾಂತರಗಳಿAದ ಮುಚ್ಚಲ್ಟಟ್ಟಿದ್ದ ಮಾದಾಪಟ್ಟಣ ಅಂಗನವಾಡಿ-೧ ಕೇಂದ್ರವನ್ನು ಪುನರಾರಂಭಿಸಲಾಯಿತು.
ಗ್ರಾಮದ ಕಾಂಗ್ರೆಸ್ ಮುಖಂಡ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ಹೆಚ್.ಜೆ. ದಾಮೋದರ್ ಮತ್ತಿತರರು ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಅಂಗನವಾಡಿಗೆ ಬರಮಾಡಿಕೊಂಡು ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭ ಮಾತನಾಡಿದ ದಾಮೋದರ್, ಗ್ರಾಮವಾಗಿರುವ ಮಾದಾಪಟ್ಟಣದಲ್ಲಿ ಅಂಗನವಾಡಿ ಮುಚ್ಚಿದ ಹಿನ್ನೆಲೆಯಲ್ಲಿ ದೂರದ ಅಂಗನವಾಡಿಗೆ ಮಕ್ಕಳನ್ನು ಕರೆದೊಯ್ಯುವ ಪೋಷಕರು ಮಕ್ಕಳ ಪರಿಸ್ಥಿತಿ ಗಮನಿಸಿ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರ ಸೂಚನೆ ಅನುಸಾರ ಈ ಅಂಗನವಾಡಿ ಕೇಂದ್ರವನ್ನು ಮತ್ತೆ ತೆರೆಯಲಾಗಿದೆ. ಶಾಸಕರ ಅನುದಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೀಘ್ರದಲ್ಲೇ ಈ ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಲು ಹಾಗೂ ಖಾಯಂ ಶಿಕ್ಷಕಿ ಹಾಗೂ ಸಹಾಯಕಿಯನ್ನು ನೇಮಕಾತಿ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.ಗುಡ್ಡೆಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ಕಟ್ಟಡ ಶಿಥಿಲಾವಸ್ಥೆ ನೆಪವೊಡ್ಡಿ ಕಳೆದ ಎರಡು ವರ್ಷಗಳಿಂದ ಅಂಗನವಾಡಿಗೆ ಬೀಗ ಹಾಕಲಾಗಿತ್ತು. ಕಟ್ಟಡ ಹಳೆಯದಾದರೆ ಇಲಾಖೆ ಮೂಲಕ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವುದನ್ನು ಬಿಟ್ಟು ಅಂಗನವಾಡಿಯನ್ನು ಮುಚ್ಚಿ ಮಕ್ಕಳಿಗೆ ಅನಾನುಕೂಲ ಸೃಷ್ಠಿಸುವುದು ಸರಿಯಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ನಮ್ಮ ಅಹವಾಲು ಆಲಿಸಬೇಕಿದೆ, ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಬೇಕಿದೆ ಎಂದು ಪೋಷಕರು ಒತ್ತಾಯಿಸಿದರು.