ಚೆಯ್ಯಂಡಾಣೆ, ಮಾ. ೯: ಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಮುಂಡ್ರೋಟು ವಲಯ ಅರಣ್ಯ ಇಲಾಖೆ ವತಿಯಿಂದ ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಭಾಗದ ವಲಯ ಅರಣ್ಯ ಗಸ್ತು ಪಾಲಕ ಈರಣ್ಣ ತೇಲಿ ಮಾತನಾಡಿ, ನಿಸರ್ಗವು ನಮಗೆ ತಾಯಿ ಇದ್ದಂತೆ ಅದನ್ನು ರಕ್ಷಿಸುವುದು ನಮ್ಮ ಧರ್ಮ, ತಾಯಿ ತನ್ನ ಮಗುವನ್ನು ಹೇಗೆ ಪ್ರೀತಿಯಿಂದ ಪೋಷಿಸುತ್ತಾಳೋ ಹಾಗೆ ಈ ಪ್ರಕೃತಿ ನಮಗೆ ಆಮ್ಲಜನಕ ನೀರು ಮತ್ತು ಆಹಾರವನ್ನು ನೀಡಿ ಸಲಹುತ್ತಿದೆ. ಅರಣ್ಯಗಳ ಸಂರಕ್ಷಣೆ ಬಹಳ ಮುಖ್ಯ. ಅರಣ್ಯಗಳು ಭೂಮಿಯ ಶ್ವಾಸಕೋಶಗಳು, ಮರಗಳಿಲ್ಲದಿದ್ದರೆ ನಾವು ಉಸಿರಾಡುವ ಗಾಳಿ ವಿಷವಾಗುತ್ತದೆ. ಅರಣ್ಯಗಳು ಮಳೆಯನ್ನು ತರಿಸುತ್ತದೆ ಮತ್ತು ಸಾವಿರಾರು ವನ್ಯಜೀವಿಗಳಿಗೆ ಸುಂದರ ಆಶ್ರಯ ನೀಡುತ್ತದೆ. ಆದರೆ ಇಂದು ನಮ್ಮ ಸ್ವಾರ್ಥಕ್ಕಾಗಿ ನಾವು ಕಾಡುಗಳನ್ನು ನಾಶ ಮಾಡುತ್ತಿದ್ದೇವೆ. ಅರಣ್ಯಗಳ ರಕ್ಷಣೆ ಇಲಾಖೆಯಿಂದ ಮಾತ್ರವಲ್ಲ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.
ಅರಣ್ಯಗಳ ನಾಶಕ್ಕೆ ಕೇವಲ ಕೊಡಲಿ ಮಾತ್ರ ಕಾರಣವಲ್ಲ ಬದಲಾಗಿ ಕಾಡ್ಗಿಚ್ಚು ಎಂಬ ಮಹಾಮಾರಿ ಕೂಡ ಒಂದು ದೊಡ್ಡ ಕಾರಣವಾಗಿದೆ. ಮಾನವನ ಸಣ್ಣ ನಿರ್ಲಕ್ಷö್ಯತನದಿಂದ ಕಾಡಿಗೆ ಬೆಂಕಿ ಬಿದ್ದಾಗ ಕ್ಷಣಾರ್ಧದಲ್ಲಿ ಸಾವಿರಾರು ಎಕರೆ ಅರಣ್ಯ ಭಸ್ಮವಾಗುತ್ತದೆ. ಒಂದು ಸಣ್ಣ ಬೆಂಕಿಕಡ್ಡಿ ಕೋಟಿಗಟ್ಟಲೆ ಮರಗಳನ್ನು ಸುಟ್ಟು ಬೂದಿ ಮಾಡುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅಸಹಾಯಕ ಪ್ರಾಣಿ ಪಕ್ಷಿಗಳ ಪ್ರಾಣಗಳ ಜೊತೆಗೆ ಸಸ್ಯ ಸಂಕುಲವೇ ನಶಿಸಿ ಅಪರೂಪದ ಸಸ್ಯ ಪ್ರಭೇದಗಳನ್ನು ನಾವು ಕಳೆದುಕೊಳ್ಳುತ್ತೇವೆ. ಪ್ರವಾಸಿಗರು ಅಥವಾ ಸ್ಥಳೀಯರು ಕಾಡಿನ ಹತ್ತಿರ ಬೆಂಕಿಯನ್ನು ಬಳಸುವಾಗ ಜಾಗರೂಕರಾಗದಿದ್ದರೆ ಇಡೀ ಜೀವಸಂಕುಲವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮಗೆ ನಮ್ಮ ಪೂರ್ವಜರು ನೀಡಿರುವ ಬೆಲೆ ಕಟ್ಟಲು ಸಾಧ್ಯವಾಗದ ಅಮೂಲ್ಯವಾದ ನಿಸರ್ಗವನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಯ ಉಪಯೋಗಕ್ಕೆ ಯಾವುದೇ ಚ್ಯುತಿ ಬಾರದಂತೆ ಹಿಂತಿರುಗಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಂ ಹೆಚ್ ರಜೀನ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಉಸಿರಾಡಲು ಕೂಡ ಶುದ್ಧ ಗಾಳಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇಲಾಖೆಯಿಂದ ನೀಡುವ ಸಲಹೆ ಸೂಚನೆಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಿ ಮರಗಿಡಗಳನ್ನು ಬೆಳಿಸಿ ಪ್ರಕೃತಿ ಸೌಂದರ್ಯವನ್ನು ಕಾಪಾಡಬೇಕಾಗಿದೆ ಎಂದರು.
ಈ ಸಂದರ್ಭ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ರೋಹಿಣಿ, ಅರಣ್ಯ ಇಲಾಖೆಯ ಸಿಬ್ಬಂದಿ ಸುಭಾಷ್, ಪ್ರಜ್ವಲ್, ಮುತ್ತಪ್ಪ, ಶರತ್, ಶಾಲೆಯ ಅತಿಥಿ ಶಿಕ್ಷಕರಾದ ಸಂಜು, ಶಾರಿಕ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.