ಸೋಮವಾರಪೇಟೆ, ಮಾ. ೬: ಬೇಸಿಗೆ ಸಮಯವಾಗಿರುವ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಎಚ್ಚರ ವಹಿಸಬೇಕೆಂದು ಶಾಸಕ ಡಾ. ಮಂತರ್ ಗೌಡ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಾರದು. ತೀವ್ರ ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಿ, ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಜಲಮೂಲಗಳ ರಕ್ಷಣೆ, ನೈಸರ್ಗಿಕ ನೀರಿನ ಬಳಕೆ, ಬೋರ್‌ವೆಲ್, ಮೋಟಾರ್‌ಗಳ ಸುಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಶಾಸಕರು, ಎಲ್ಲಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬAದರೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸದೇ ತಕ್ಷಣ ಪರಿಹಾರ ಒದಗಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ, ತಾ.ಪಂ. ಆಡಳಿತಾಧಿಕಾರಿಯಾದ ಅಬ್ದುಲ್ ನಭಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.