ಅಮೇರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು ಇರಾನ್ ನಡೆಸಿದ ಡ್ರೋನ್ ದಾಳಿಗೆ ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿದೆ.

ಇರಾನ್ ಸರ್ವಾಧಿಕಾರಿಯು ಯು.ಎಸ್.ಎ-ಇಸ್ರೇಲ್ ಜಂಟಿ ದಾಳಿಯಲ್ಲಿ ಬಲಿಯಾದ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳಲ್ಲಿನ ಯು.ಎಸ್.ಎ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸೇನೆಯು ದಾಳಿ ನಡೆಸುತ್ತಿದೆ. ಸೌದಿ ಅರೇಬಿಯಾದಲ್ಲಿಯೂ ಯು.ಎಸ್.ಎ ಮಿಲಿಟರಿ ಕೇಂದ್ರಗಳಿದ್ದು ಇದನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿದ್ದು, ಇದೀಗ ತೈಲ ಘಟಕದ ಮೇಲೂ ದಾಳಿ ಮಾಡಿದೆ.

ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲೊAದಾದ ಈ ಘಟಕದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿರ್ವಹಿಸುತ್ತಿರುವ ಸೌದಿ ಅರಾಮ್ಕೋ ಸಂಸ್ಥೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಪೂರ್ವ ಸೌದಿ ಅರೇಬಿಯಾದಲ್ಲಿರುವ ಈ ಘಟಕ ದಿನಕ್ಕೆ ಸುಮಾರು ೫.೫ ಲಕ್ಷ ಬ್ಯಾರಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ದಾಳಿಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಕರಣಾ ಘಟಕವು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇದೆ.