ನಾಪೋಕ್ಲು, ಮಾ. ೨: ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ತಕ್ಕ ಮುಖ್ಯಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತು ಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ ಇನ್ನಿತರ ಪೂಜೆಗಳ ಬಳಿಕ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು. ದೇವರ ಪ್ರಾರ್ಥನೆಯ ಬಳಿಕ ದೇವರ ಪ್ರದರ್ಶನ ಬಲಿ ಜರುಗಿ, ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ದೇವರ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ಶ್ರದ್ದಾಭಕ್ತಿಯಿಂದ ತೆರಳಿದರು. ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಗ್ರಾಮದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ದಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತು ಪೋರಾಟದ ಅಕ್ಕಿಯನ್ನು ಮೂರು ಭಾಗ ಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊAಡು ದೇವರ ಕಟ್ಟು ಸಡಿಲಿಸಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ಹಬ್ಬ ಸಂಭ್ರಮದಿAದ ಜರುಗಿತು. ಈ ಸಂದರ್ಭ ಅರ್ಚಕ ಕುಶ ಭಟ್ ಹಾಗೂ ಜಗದೀಶ್, ಶ್ರೀಕಾಂತ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ದೇವತಕ್ಕರು, ಭಕ್ತ ಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರುಗಳು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಚಮಂಡ ಪೂವಣ್ಣ, ಪದಾಧಿಕಾರಿ, ಸದಸ್ಯರುಗಳು, ಕಾರ್ಯನಿರ್ವಹಣಾ ಅಧಿಕಾರಿ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಪಾರುಪತ್ತೇಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಊರಿನ ಪರವೂರಿನ ಭಕ್ತಾದಿಗಳು, ಆಧಿಕಾರಿಗಳು ಪಾಲ್ಗೊಂಡಿದ್ದರು.

- ದುಗ್ಗಳ ಸದಾನಂದ