ಮಡಿಕೇರಿ, ಫೆ. ೨೮: ನಾಪೋಕ್ಲುವಿನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವದರೊಂದಿಗೆ ಜಿಲ್ಲಾಡಳಿತ ಅವರುಗಳನ್ನು ಗಡೀಪಾರು ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ; ಪಿಕ್ ಅಪ್ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ಅಮಾಯಕ ಯುವಕನ ಮೇಲೆ ನಿನ್ನೆ ಸಂಜೆ ನಾಪೋಕ್ಲುವಿನಲ್ಲಿ ೫ರಿಂದ ೬ ಮಂದಿ ಸೇರಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಇದು ಖಂಡನೀಯ. ರಸ್ತೆ ತಡೆ, ಒತ್ತಡ ಹೇರಿದ ಮೇಲೆ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳನ್ನು ಬಂದಿಸಿದ್ದಾರೆ. ಪೊಲೀಸರ ಕ್ರಮ ಶ್ಲಾಘನೀಯ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಬಂದ ಮೇಲೆ ಇಂತಹ ಕೃತ್ಯಗಳು ಹಾಡ ಹಗಲೇ ನಡೆಯುತ್ತಿವೆ. ಈ ಹಿಂದೆ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಯಾವದೇ ಕ್ರಮ ಆಗಿಲ್ಲ. ಇಂತಹ ಕೃತ್ಯಗಳು ಮುಂದುವರಿಯಬಾರದು. ಹಿಂದೂ ಸಂಗಮ ಕಾರ್ಯಕ್ರಮ ಎಲ್ಲಾ ಕಡೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಆಗಬಾರದು. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವದರೊಂದಿಗೆ ಅವರುಗಳನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ; ದೇಶಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಪೂರ್ವ ತಯಾರಿಯಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರ ಪುತ್ರ ಇರುವದು ತಿಳಿದು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಅವರ ವಿರುದ್ಧ ಯಾವದೇ ಕ್ರಮ ಆಗುತ್ತಿಲ್ಲ. ಬಿಜೆಪಿ ಸರಕಾರವಿದ್ದಾಗ ಅಕ್ರಮಗಳಲ್ಲಿ ಶಾಮಿಲಾದವರಿಗೆ ಬೆಂಬಲ ನೀಡಿಲ್ಲ, ಮೊಕದ್ದಮೆ ಹೂಡದಂತೆ ಶಾಸಕರುಗಳು ಕೂಡ ಪೊಲೀಸರಿಗೆ ಒತ್ತಡ ಹೇರಿಲ್ಲ. ಕಾಂಗ್ರೆಸ್ ಸರಕಾರ ಒಂದು ವರ್ಗವನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಸಂಗಮದ ಯಶಸ್ಸನ್ನು ಹಾಳು ಮಾಡಲು ಈ ರೀತಿ ಮಾಡಲಾಗಿದೆ. ಕಾಂಗ್ರೆಸ್ ಇಂತಹ ಕೃತ್ಯಗಳಿಗೆ ಹಿಂದಿನಿAದ ಬೆಂಬಲ ನೀಡುತ್ತಾ ಎದುರಿನಲ್ಲಿ ಕ್ರಮ ಕೈಗೊಳ್ಳುವ ನಾಟಕವಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಹಿಂದೂಗಳಿಗೆ ತೊಂದರೆಯಾದಲ್ಲಿ ಬಿಜೆಪಿ ಕೈಕಟ್ಟಿ ಕೂರುವದಿಲ್ಲವೆಂದು ಹೇಳಿದರು. ಜಿಲ್ಲೆಯಲ್ಲಿ ಶಾಂತಿಗೆ ಧಕ್ಕೆ ತರುವ ಕೆಲಸ ಆಗಬಾರದು. ಆರೋಪಿಗಳಿಗೆ ಬೆಂಬಲ ನೀಡದೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾ ವಕ್ತಾರ ಬಿ.ಕೆ. ಅರುಣ್‌ಕುಮಾರ್ ಮಾತನಾಡಿ; ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಕಿಡಿಗೇಡಿಗಳು, ಕೆಲವು ಸಂಘಟನೆಗಳು ಸೇರಿ ಪೂರ್ವಯೋಜಿತವಾಗಿ ಈ ಕೃತ್ಯ ನಡೆಸಿದ್ದಾರೆ. ಅವರುಗಳ ಬಳಿ ಮಾರಕಾಸ್ತçಗಳಿದ್ದುದೇ ಸಾಕ್ಷಿ, ಹಿಂದೂ ಸಂಗಮ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಿಯೂ ಅನ್ಯ ಕೋಮಿನ ವಿಷಯ ಮಾತನಾಡಿಲ್ಲ, ದೂರಿದ ಇತಿಹಾಸವಿಲ್ಲ.ಆದರೂ ಈ ರೀತಿಯ ಕೃತ್ಯವೆಸಗಲಾಗುತ್ತಿದೆ. ಕಾಂಗ್ರೆಸ್ ಸರಕಾರ ಇದ್ದಾಗ ಮಾತ್ರ ಈ ರೀತಿ ಆಗುತ್ತಿದೆ. ಇದಕ್ಕೆ ಯಾರ ಬೆಂಬಲ ಇದೆಯೆಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು. ಹಿಂದೂ ಸಮುದಾಯ ಶಾಂತಿ ಪ್ರಿಯರು; ಇದಕ್ಕೆ ಮಡಿಕೇರಿಯಲ್ಲಿ ನಡೆದ ಹಿಂದೂ ಸಂಗಮ ಉದಾಹರಣೆ, ನಾಪೋಕ್ಲು ಭಾಗದಲ್ಲಿ ಮಾತ್ರ ಯಾಕೆ ಹೀಗೆ ಆಗುತ್ತಿದೆ ಎಂದು ಪ್ರಶ್ನಿಸಿದ ಅವರು; ಮುಂದಿನ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳನ್ನು ಬೆಂಬಲಿಸುವ ಪಕ್ಷಗಳನ್ನು ಬೆಂಬಲಿಸುವ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ; ಅನ್ಯ ಕೋಮಿನವರು ಹಿಂದೂಗಳ ಮೇಲೆಯೇ ಗುರಿಯಿಟ್ಟುಕೊಂಡು ಧಾಳಿ ಮಾಡುತ್ತಾರೆ. ಈಚೆಗೆ ಕಲ್ಲುಗುಂಡಿಯಲ್ಲಿ ಸ್ವಚ್ಛತಾ ಕಾಯಕದಲ್ಲಿದ್ದ ಪಂಚಾಯ್ತಿ ನೌಕರನ ಮೇಲೆ ಕಾರಿನಲ್ಲಿ ಬಂದ ಕೆಲವರು ಗಾಂಜಾ ಅಮಲಿನಲ್ಲಿ ಹಲ್ಲೆ ಮಾಡಿದ್ದಾರೆ. ಇದೀಗ ನಾಪೋಕ್ಲುವಿನಲ್ಲೂ ಹಲ್ಲೆಯಾಗಿದೆ. ಗಾಂಜಾ ಸೇವಿಸಿ ಹಿಂದೂಗಳ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಹಿಂದಿನ ಎಸ್‌ಪಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದರು. ಈಗಿನ ಎಸ್‌ಪಿ ಅವರು ಕೂಡ ಇದಕ್ಕೆ ಕಡಿವಾಣ ಹಾಕಬೇಕು. ಮಂಗಳೂರಿನಲ್ಲಿ ಮಾಡುತ್ತಿರುವಂತೆ ಸಂಶಯ ಇರುವ ಯುವಕರು, ವ್ಯಕ್ತಿಗಳ ವಾಹನಗಳನ್ನು ಪರಿಶೀಲನೆ ಮಾಡಬೇಕಿದೆ. ರಾಜ್ಯದ ಗೃಹ ಸಚಿವರು ಕೂಡ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖ್ ಸಜೀಲ್ ಕೃಷ್ಣನ್ ಇದ್ದರು.