ಭಾಗಮAಡಲ, ಫೆ. ೨೮: ಹಿಂದೂ ಧರ್ಮವನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಕಡಗದಾಳುವಿನ ಮಹೇಶ್ ವಿಷಾದ ವ್ಯಕ್ತಪಡಿಸಿದರು. ಚೆಟ್ಟಿಮಾನಿ ಗ್ರಾಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದುತ್ವ ಒಂದು ಜೀವನ ಪದ್ಧತಿ. ಭಾರತೀಯ ಸನಾತನ ಜೀವನ ಪದ್ಧತಿ ಇಡೀ ವಿಶ್ವಕ್ಕೆ ಮಾದರಿ. ಹಿಂದುತ್ವ ಬಿಟ್ಟು ದೇಶದ ಕಲ್ಪನೆ ಮಾಡಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದಾಯನ ರಾಮಕೃಷ್ಣ ವಹಿಸಿದ್ದರು. ದಾಯನ ಲಿಖಿತ ಸ್ವಾಗತಿಸಿದರು. ಶರತ್ ಪದಕಲ್ಲು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಕೆ. ಜಿ. ವಂದಿಸಿದರು. ವೇದಿಕೆಯಲ್ಲಿ ಶಿವದೇವಿ ಅವಿನಾಶ್, ಕಾರ್ಯಕ್ರಮ ಸಂಚಾಲಕ ವಿವೇಕ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕೇರಳದ ಚಂಡೆ ವಾದ್ಯ, ಭಜನಾ ಕುಣಿತ, ಸ್ತಬ್ಧ ಚಿತ್ರಗಳ ಮೂಲಕ ಪದಕಲ್ಲುವಿನ ಭಗವತಿ ದೇವಾಲಯದಿಂದ ಮುಖ್ಯ ರಸ್ತೆ ಮೂಲಕ ಚೆಟ್ಟಿಮಾನಿ ಆಟದ ಮೈದಾನದವರೆಗೆ ಅದ್ದೂರಿ ಶೋಭಾ ಯಾತ್ರೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಶೋಭ ಯಾತ್ರೆಗೆ ಮೆರುಗು ನೀಡಿದರು. ಸಾಂದೀಪನಿ ಶಾಲಾ ಮಕ್ಕಳು ವಂದೇ ಮಾತರಂ ಗೀತೆ ಹಾಡಿದರು.
-ಸುನಿಲ್