ಮಡಿಕೇರಿ, ಫೆ. ೨೮: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನಿನ ಪಾಲನೆ ಅತ್ಯಂತ ಮುಖ್ಯವಾಗಿದೆ. ನಾಪೋಕ್ಲು ಘಟನೆಯ ಆರೋಪಿಗಳನ್ನು ದೇಶದಿಂದಲೇ ಗಡಿಪಾರು ಮಾಡಬೇಕಾದ ಅನಿವಾರ್ಯತೆ ಇದೆ.

ಕಾಂಗ್ರೆಸ್ ಪಕ್ಷದ ನಾಪೋಕ್ಲು ಬ್ಲಾಕ್ ಅಧ್ಯಕ್ಷರ ಪುತ್ರನೂ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಆಘಾತಕಾರಿ ವಿಷಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

* ನಾಪೋಕ್ಲುವಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪಿಯನ್ನು ಗಡಿಪಾರು ಮಾಡಬೇಕೆಂದು ವೀರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದೂ ಧರ್ಮದ ಜಾಗೃತಿಗಾಗಿ ಶಾಂತಿಯುತವಾಗಿ ಜಿಲ್ಲಾವ್ಯಾಪಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಈ ನಡುವೆ ಬಲ್ಲಮಾವಟಿಯಲ್ಲಿ ಕಾರ್ಯಕ್ರಮ ನಡೆಸಬೇಕಾದ ಹೊತ್ತಿನಲ್ಲೇ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ಕೆಲವರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

* ನಾಪೋಕ್ಲುವಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಅಪ್ಪಚ್ಚಿರ ಗೌತಮ್ ಅವರ ಮೇಲೆ ಕಿಡಿಗೇಡಿಗಳು ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ನಾಪೋಕ್ಲು ಕೊಡವ ಸಮಾಜ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಮಾಜದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾಪೋಕ್ಲುವಿನಲ್ಲಿ ನಡೆದ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

* ನಾಪೋಕ್ಲುವಿನಲ್ಲಿ ನಡೆದ ಕೃತ್ಯ ವಿಷಾದಕರ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಮ್ಮತ್ತಿ ಕೊಡವ ಸಮಾಜದ ಆಡಳಿತ ಮಂಡಳಿ ಆಗ್ರಹಿಸಿದೆ.

* ಹಿಂದೂ ಸಂಘಟನೆಯ ಕಾರ್ಯಕರ್ತ ಅಪ್ಪಚ್ಚಿರ ಗೌತಮ್ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಅವರನ್ನು ಭೇಟಿಯಾದ ಅವರು ಸಾಂತ್ವನ ಹೇಳಿದರು.

ನಂತರ ಮಾತನಾಡಿದ ನಾಚಪ್ಪ, ನಾಪೋಕ್ಲು ಘಟನೆ ಅತ್ಯಂತ ಖಂಡನೀಯ ಕೃತ್ಯವಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

* ಕೊಡಗು ಸರ್ವ ಧರ್ಮೀಯರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ ಜಿಲ್ಲೆಯಾಗಿದ್ದು, ನಿನ್ನೆ ನಾಪೋಕ್ಲುವಿನಲ್ಲಿ ನಡೆದ ಅಹಿತಕರ ಘಟನೆಯನ್ನು ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು ಜಿಲ್ಲಾ ಸಮಿತಿ ಖಂಡಿಸುತ್ತದೆ.

ಆರೋಪಿಗಳು ಯಾರೇ ಆದರೂ ಅವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸುವುದಾಗಿ ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿಯು ಪತ್ರಿಕಾ ಹೇಳಿಕೆ ನೀಡಿದೆ.

* ನಾಪೋಕ್ಲುವಿನಲ್ಲಿ ಅಪ್ಪಚ್ಚಿರ ಗೌತಮ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕೊಡವ ಸಮಾಜ ಒಕ್ಕೂಟ ಖಂಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರುಗಳು ಕೊಡಗಿನಲ್ಲಿ ಇಂತಹ ಘಟನೆಗಳು ನಡೆಯಬಾರದು. ಆರೋಪಿಗಳು ಬಂಧಿತರಾಗಿದ್ದರೂ ಅವರುಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸಿದ್ದಾರೆ.