ಮಡಿಕೇರಿ, ಫೆ. ೨೬: ಕೊಡಗು ಜಿಲ್ಲೆಯಲ್ಲಿ ಔಷಧಿ, ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ನೀಗಿಸುವದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ. ಆನಂದ್, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮನವಿ ಮಾಡಿಕೊಂಡಿದ್ದರೂ ಇದುವರೆಗೂ ಯಾವದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಹಾಗಾಗಿ ಕಳೆದ ತಾ. ೧೩ ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದೊಂದಿಗೆ ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮಾ. ೧೧ ರಿಂದ ೧೫ ರವರೆಗೆ ಮೊದಲ ಹಂತದಲ್ಲಿ ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ವೈದ್ಯರು, ಅಧಿಕಾರಿ, ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ ತುರ್ತು ಸೇವೆಯನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುವದು. ಎರಡನೇ ಹಂತದಲ್ಲಿ ಮಾ.೧೬ರಿಂದ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.

ಔಷಧಿ ಕೊರತೆ

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಸಮರ್ಪಕವಾಗಿ ಔಷಧಿ ಸರಬರಾಜಾಗುತ್ತಿಲ್ಲ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದವರು ಸರಿಯಾಗಿ ಔಷಧಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸರಬರಾಜು ಮಾಡದೇ ಇರುವದರಿಂದ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಔಷಧೋಪಚಾರ ದೊರೆಯದೆ ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಸರಿಪಡಿಸಿಲ್ಲ. ಜಿಲ್ಲೆಯಲ್ಲಿ ಒಟ್ಟು ೨೩೯ ರೀತಿಯ ಔಷಧಿಗಳ ಅವಶ್ಯಕತೆಯಿದ್ದು ಕೇವಲ ೧೦೮ ಔಷಧಿಗಳು ಮಾತ್ರ ಲಭ್ಯವಿದೆ. ಶೇ. ೫೦ ಕ್ಕಿಂತ ಹೆಚ್ಚು ಕೊರತೆಯಿದೆ. ಹಾಗಾಗಿ ಅನಿವಾರ್ಯವಾಗಿ ರೋಗಿಗಳಿಗೆ ಹೊರಗಡೆಯಿಂದ ಔಷಧಿ ಕೊಂಡುಕೊಳ್ಳಲು ಬರೆದುಕೊಡಲಾಗುತ್ತಿದೆ ಎಂದು ತಿಳಿಸಿದರು.

ವೈದ್ಯ-ಸಿಬ್ಬಂದಿ ಕೊರತೆ

ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ೩ ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರಕಾರಿ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಇದುವರೆಗೆ ನೇಮಕಾತಿ ಮಾಡಿಲ್ಲ. ೧೯೦ ಮಂದಿ ಎಎನ್‌ಎಂ ಶುಶ್ರೂಷಕಿಯರು ಇರುವಲ್ಲಿ ಕೇವಲ ೬೨ ಮಂದಿ ಮಾತ್ರ ಇದ್ದಾರೆ. ಎಂಬಿಬಿಎಸ್ ಮಾಡಿರುವವರಲ್ಲಿ ೩೦ರಲ್ಲಿ ೧೬ ಮಂದಿ ಇದ್ದಾರೆ. ತಜ್ಞ ವೈದ್ಯರು ೩೦ರ ಪೈಕಿ ೫ ಮಂದಿ ಇದ್ದಾರೆ. ಸಿಬ್ಬಂದಿಗಳ ಕೊರತೆಯೂ ಇದೆ. ಎಲ್ಲರೂ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ಇನ್ನುಳಿದಂತೆ ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸುವದು, ಇಲಾಖೆಯ ಎಲ್ಲಾ ವೃಂದದ ಅಧಿಕಾರಿ-ನೌಕರರಿಗೆ ಮುಂಬಡ್ತಿ ನೀಡುವದು, ನಿಯಮಗಳಲ್ಲಿರುವಂತೆ ಸೇವಾನಿರತ ವೈದ್ಯರು, ಅಧಿಕಾರಿ, ನೌಕರರ ಉನ್ನತ ವ್ಯಾಸಂಗ/ ಸ್ನಾತಕೋತ್ತರ ವ್ಯಾಸಂಗಕ್ಕೆ ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ವೇತನ, ಭತ್ಯೆ, ಶುಲ್ಕಗಳೊಂದಿಗೆ ಅವಕಾಶ ನೀಡುವದು, ಇಲಾಖೆಯ ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೆ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವದನ್ನು ಸರಿಪಡಿಸುವದು. ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ-ನೌಕರರನ್ನೇ ನಿಯೋಜಿಸುವದು, ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರ ವೃಂದದ ಹುದ್ದೆಗಳನ್ನು ಭರ್ತಿ ಮಾಡುವದು, ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸೂಕ್ತ ವೇತನ ಹೆಚ್ಚಳ ಮಾಡುವದು, ವೇತನ ಭತ್ಯೆಗಳನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ನೀಡುವದು, ಸಿ.ಜಿ.ಹೆಚ್.ಎಸ್., ಎ.ಐ.ಸಿ.ಟಿ.ಇ. (ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿ) ವೇತನ ನೀಡುವದು, ಸರಕಾರಿ ವೈದ್ಯರು ಕರ್ತವ್ಯದ ಅವಧಿಯ ನಂತರ ಖಾಸಗಿ ಸೇವೆಗೆ ಈ ಹಿಂದಿನAತೆ ಅವಕಾಶ ನೀಡುವದು ಸೇರಿದಂತೆ ಒಟ್ಟು ೧೨ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿರುವದಾಗಿ ಡಾ. ಆನಂದ್ ಮಾಹಿತಿ ನೀಡಿದರು.

ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಸಿ. ಅರುಣ್ ಕುಮಾರ್ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯವರು ಗ್ರಾಮೀಣ ಪ್ರದೇಶದಲ್ಲಿ ಉಚಿತ ಸೇವೆ ನೀಡುವವರಾಗಿದ್ದಾರೆ. ಅವರುಗಳ ಬೇಡಿಕೆ ಈಡೇರಿಸಿಕೊಳ್ಳಲು ಒಟ್ಟು ೧೩ ವೃಂದ ಸಂಘಗಳು ಒಟ್ಟಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಔಷಧಿ, ಉಪಕರಣ, ವರ್ಗಾವಣೆ, ವೇತನಗಳ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆಗೆ ಬೆಂಬಲ ನೀಡುವ ಸಲುವಾಗಿ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸರಕಾರ ಆರೋಗ್ಯ ಇಲಾಖೆಯವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದರು.

ರಾಷ್ಟಿçÃಯ ಆರೋಗ್ಯ ಅಭಿಯಾನ ನೌಕರರ ಸಂಘದ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ಮುಷ್ಕರಕ್ಕೆ ಬೆಂಬಲ ನೀಡಲು ರಾಜ್ಯಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ ೪೨೮ ಗುತ್ತಿಗೆ ಆಧಾರದ ನೌಕರರ ಪೈಕಿ ೩೬೦ ಮಂದಿ ಮಾತ್ರ ಇದ್ದಾರೆ. ಇನ್ನೂ ಕೂಡ ಯಾರನ್ನೂ ಖಾಯಂ ಮಾಡಿಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ೪೨ ದಿನಗಳ ಕಾಲ ಪ್ರತಿಭಟನೆ ಮಾಡಿದ್ದ ಸಂದರ್ಭ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಅವರುಗಳು ಭೇಟಿ ನೀಡಿ ಖಾಯಂಗೊಳಿಸುವ ಬಗ್ಗೆ ಭರವಸೆ ನೀಡಿದ್ದರು ಆದರೆ ಇದುವರೆಗೆ ಯಾವದೇ ಪ್ರಕ್ರಿಯೆ ಆಗಿಲ್ಲ. ಬೇರೆ ರಾಜ್ಯಗಳಲ್ಲಿ ಖಾಯಂ ಮಾಡಿದ್ದಾರೆ. ಇಲ್ಲಿಯೂ ಖಾಯಂ ಮಾಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಾಥ್ ಜಿ.ವಿ., ನೇತ್ರ ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್. ಚೇತನ್, ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷೆ ಎಸ್.ವಿ. ನಾಗಮಣಿ ಇದ್ದರು.