ಕೂಡಿಗೆ, ಫೆ. ೨೫: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಬಾಣವಾರ ಮುಖ್ಯ ರಸ್ತೆ ಮತ್ತು ಹಾಸನ ಹೆದ್ದಾರಿ ರಸ್ತೆಯ ಬದಿಗಳಲ್ಲಿ ಸಾರ್ವಜನಿಕರು ಕಸವನ್ನು ಹಾಕುತ್ತಿದ್ದು, ತಪ್ಪಿತಸ್ತರ ಪತ್ತೆಗೆ ಗ್ರಾಮ ಪಂಚಾಯಿತಿ ವತಿಯಿಂದ ಸಿ.ಸಿ. ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದೆ.

ಇದರ ಜೊತೆಯಲ್ಲಿ ಕಸ ಹಾಕಿದ ಸ್ಥಳವನ್ನು ಸ್ವಚ್ಛಗೊಳಿಸಿ ಆ ಜಾಗದಲ್ಲಿ ಮರಗಳನ್ನು ನೆಡಲಾಗುತ್ತಿದೆ.

ಬಾಣವಾರ ಮುಖ್ಯ ರಸ್ತೆಯಲ್ಲಿ ಕಸ ಘಟಕವಿದ್ದರೂ ಸಹ ಸಾರ್ವಜನಿಕರು ಕಸವನ್ನು ತಮ್ಮ ವಾಹನಗಳಲ್ಲಿ ತಂದು ಮನಬಂದAತೆ ರಸ್ತೆಯ ಅಂಚಿನಲ್ಲಿ ಬಿಸಾಡಿ ದುರ್ವಾಸನೆ ಬರುವಂತೆ ಮಾಡುತ್ತಿದ್ದರು. ಇದರ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ತೀರ್ಮಾನದಂತೆ ಮೊದಲ ಹಂತವಾಗಿ ಸಿ.ಸಿ. ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

ಕಸವನ್ನು ಹಾಕಿದಲ್ಲಿ ದಂಡ ವಸೂಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸ್ವಚ್ಛ ಗ್ರಾಮ ಯೋಜನೆ ಅಡಿಯಲ್ಲಿ ಸ್ವಚ್ಚತೆಗಾಗಿ ಹೆಚ್ಚಿನ ಆದ್ಯತೆ ನೀಡಲು ಗ್ರಾಮಸ್ಥರ ಸಹಕಾರ ಬಹುಮುಖ್ಯ. ಗ್ರಾಮಸ್ಥರು ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕಸದ ವಾಹನಕ್ಕೆ ಹಾಕುವ ಮೂಲಕ ಸಹಕಾರ ನೀಡಬೇಕು ಎಂದು ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮನವಿ ಮಾಡಿದ್ದಾರೆ.