ಮಡಿಕೇರಿ, ಫೆ. ೨೪: ಜೀವ ರಕ್ಷಕವಾದ ರಕ್ತಕ್ಕೆ ಕೊಡಗಿನಲ್ಲಿ ದಿನದಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ರಕ್ತದಾನ ಮಾಡಲು ಮುಂದಾಗಬೇಕಾದ ಅತ್ಯಗತ್ಯವಿದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ರವಿ ಕರುಂಬಯ್ಯ ಕರೆ ನೀಡಿದರು.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಹಿಳೆಯರಿಗಾಗಿಯೇ ರಕ್ತದಾನ ಶಿಬಿರ ಆಯೋಜನಾ ಕಾರ್ಯಕ್ರಮದಲ್ಲಿ ರಕ್ತದಾನ ತಪ್ಪುಗ್ರಹಿಕೆ ಮತ್ತು ವಾಸ್ತವ ವಿಚಾರದ ಕುರಿತಾಗಿ ಅವರು ಮಾಹಿತಿ ನೀಡಿದರು.

ಮಾಸಿಕ ೬೦೦ ಯೂನಿಟ್ ರಕ್ತದ ಅಗತ್ಯವಿದ್ದು ಇಷ್ಟೊಂದು ರಕ್ತ ಸಂಗ್ರಹವಾಗದ ಹಿನ್ನಲೆಯಲ್ಲಿ ರಕ್ತದ ಕೊರತೆ ಆಸ್ಪತ್ರೆಗಳಲ್ಲಿ ತೀವ್ರವಾಗಿದೆ. ಕೆಲವು ವರ್ಷಗಳ ಹಿಂದಿನವರೆಗೆ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ೧೦೦ ಯೂನಿಟ್ ರಕ್ತದ ಅವಶ್ಯಕತೆಯಿತ್ತು. ಇದೀಗ ಕೊಡಗು ಮಾತ್ರವಲ್ಲದೇ ಹೊರಜಿಲ್ಲೆಗಳಿಂದಲೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಹಿನ್ನೆಲೆ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತೀ ತಿಂಗಳು ೬೦೦ ಯೂನಿಟ್ ರಕ್ತದ ಅಗತ್ಯತೆಯಿದೆ. ವಾರದ ಮೂರು ದಿನಕ್ಕೊಂದು ಶಿಬಿರವನ್ನು ರಕ್ತನಿಧಿ ಕೇಂದ್ರದಿAದ ಆಯೋಜಿಸಲೇಬೇಕಾದ ಅನಿವಾರ್ಯತೆಯಿದ್ದು ಕಳೆದ ವರ್ಷ ಜಿಲ್ಲೆಯಲ್ಲಿ ೧೦೦ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು ಎಂದರು.

ಮಹಿಳೆಯರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಪ್ರಸ್ತುತ ೧೦೦ ರಕ್ತದಾನಿಗಳಲ್ಲಿ ಕೇವಲ ೫-೬ ಮಹಿಳೆಯರು ಮಾತ್ರ ರಕ್ತ ನೀಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕೆಂದು ಮನವಿ ಮಾಡಿದ ಅವರು, ಮೂಢನಂಬಿಕೆ, ತಪ್ಪು ತಿಳುವಳಿಕೆಯನ್ನು ಬದಿಗಿಟ್ಟು ರಕ್ತದಾನ ಮಾಡುವ ಅಗತ್ಯವಿದೆ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಎಂದರು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆಯ ಅಧ್ಯಕ್ಷೆ ಕಲಾವತಿ ಮಾತನಾಡಿ, ಮಹಿಳೆಯರಿಗಾಗಿಯೇ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.

ರೋಟರಿ ಜಿಲ್ಲಾ ಯೋಜನೆಗಳ ಸಮಿತಿ ನಿರ್ದೇಶಕ ರತನ್ ತಮ್ಮಯ್ಯ ಮಾತನಾಡಿ, ಈ ರೀತಿಯ ಶಿಬಿರಗಳು ಮಹಿಳೆಯರು ರಕ್ತದಾನ ಮಾಡುವ ನಿಟ್ಟಿನಲ್ಲಿ ಪ್ರೇರಣೆಯಾಗುತ್ತÀದೆ ಎಂದರಲ್ಲದೇ, ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಭವಿಷ್ಯದಲ್ಲಿ ರಕ್ತದಾನ ಮಾಡಬೇಕು. ಈ ಶಿಬಿರ ಮಹಿಳೆಯರಲ್ಲಿ ರಕ್ತದಾನದ ಜಾಗೃತಿ ಮೂಡಿಸುವಂತಾಗಲಿ ಎಂದು ಹಾರೈಸಿದರು.

ರೋಟರಿ ವಲಯ ೬ ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ರಕ್ತದಾನ ಶಿಬಿರವೂ ಮುಖ್ಯವಾಗಿದ್ದು, ಮಹಿಳೆಯರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ರೋಟರಿಯು ವಿವಿಧ ಯೋಜನೆ ಹಮ್ಮಿಕೊಂಡಿದೆ ಎಂದರು.

ಶಿಬಿರದ ಸಂಚಾಲಕಿ ರಶ್ಮಿದೀಪಾ ಮಾತನಾಡಿ, ಮಹಿಳೆಯರು ರಕ್ತದಾನ ಮಾಡುವಂತಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಇದನ್ನು ಹೋಗಲಾಡಿಸಿ ವಾಸ್ತವತೆಯನ್ನು ಮನದಟ್ಟು ಮಾಡಲು ಈ ಶಿಬಿರ ಆಯೋಜಿಸಲಾಗಿದೆ. ೨೨ ಮಹಿಳೆಯರು ರಕ್ತದಾನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ರಕ್ತ ಅಗತ್ಯವುಳ್ಳವರಿಗೆ ಮತ್ತೋರ್ವರು ರಕ್ತ ನೀಡಿ ಅವರ ಜೀವ ಉಳಿಸುವ ಶ್ರೇಷ್ಟ ಕಾರ್ಯಕ್ಕೆ ಮುಂದಾಗಬೇಕೆAದು ಕರೆ ನೀಡಿದರು.

ರೋಟರಿ ವಲಯ ಸೇನಾನಿ ಕಾರ್ಯಪ್ಪ ಶಿಬಿರದ ಅಗತ್ಯತೆ ಬಗ್ಗೆ ಮಾತನಾಡಿದರು. ಮಡಿಕೇರಿ ಇನ್ನರ್ ವೀಲ್ ಕಾರ್ಯದರ್ಶಿ ನಮಿತಾ ರೈ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ. ನಿರೂಪಿಸಿದರು.