*ಗೋಣಿಕೊಪ್ಪಲು, ಫೆ. ೨೪: ಯರವ ಜನಾಂಗವನ್ನು ಅಲೆಮಾರಿ ಜನಾಂಗದಿAದ ಕೈಬಿಟ್ಟು ಹಿಂದೆ ಇದ್ದಂತೆ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಿತಿಮತಿಯಲ್ಲಿ ನಡೆದ ಯರವ ಜನಾಂಗದ ವಿಚಾರ ಸಂಕಿರಣದಲ್ಲಿ ಕೈಗೊಳ್ಳಲಾಯಿತು.
‘ನಾವು ಅಲೆಮಾರಿಗಳೇ ಅಥವಾ ಮೂಲ ನಿವಾಸಿಗಳೇ’ ಎಂಬ ವಿಷಯ ಕುರಿತು ತಿತಿಮತಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಯರವ ಜನಾಂಗದವರಾದ ನಾವು ಕೊಡಗಿನ ಮೂಲನಿವಾಸಿಗಳು. ನಾವು ಯಾವತ್ತೂ ಅಲೆಮಾರಿಗಳಲ್ಲ. ಕೇರಳದ ವಯನಾಡು, ಮಾನಂದವಾಡಿ ದಕ್ಷಿಣ ಕೊಡಗಿನ ನಾಗರಹೊಳೆ ಪ್ರದೇಶಗಳೇ ನಮ್ಮ ಮೂಲಸ್ಥಾನಗಳಾಗಿವೆ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳದ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮೂಲನಿವಾಸಿಗಳಾದ ನಮ್ಮನ್ನು ಅಲೆಮಾರಿಗಳೆಂದು ಕರೆದು ನಮ್ಮ ಮೂಲ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬುಡಕಟ್ಟು ಕೃಷಿಕ ಸಂಘದ ಜಿಲ್ಲಾಧ್ಯಕ್ಷ ಯರವರ ಸಿದ್ದಪ್ಪ ಮಾತನಾಡಿ, ರಾಜ್ಯದಲ್ಲಿ ೧೨ ಅಲೆಮಾರಿ ಜನಾಂಗಗಳಿವೆ. ಅವರೊಂದಿಗೆ ನಮ್ಮನ್ನು ಸೇರಿಸಿದ್ದಾರೆ. ನಮಗಿದ್ದ ಪರಿಶಿಷ್ಟ ಪಂಗಡ ಇಲಾಖೆಯೊಂದಿಗಿನ ಸಂಪರ್ಕವನ್ನು ತೆಗೆದುಹಾಕಿ ಅಲೆಮಾರಿ ನಿಗಮಕ್ಕೆ ಸೇರಿಸಲಾಗಿದೆ. ಇದೀಗ ನಾವು ಯಾವುದೇ ಸೌಲಭ್ಯ ಕೇಳಬೇಕಾದರೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿ ಅಲೆಮಾರಿ ಅಭಿವೃದ್ಧಿ ನಿಗಮದೊಂದಿಗೆ ಚರ್ಚಿಸಿ ಸೌಲಭ್ಯ ಪಡೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ೧೨ ಅಲೆಮಾರಿ ಜನಾಂಗಗಳಿದ್ದು ಇವರಿಗೆ ನೀಡುವ ಅನುದಾನವೂ ಕಡಿಮೆ ಇದೆ. ಕೊಡಗಿನ ಮೂಲ ನಿವಾಸಿಗಳಾಗಿರುವ ಮತ್ತು ನೈಜ ಬುಡಕಟ್ಟು ಜನಾಂಗವಾಗಿರುವ ನಮಗೆ ಹೊರಗಿನ ಅಲೆಮಾರಿಗಳೊಂದಿಗೆ ಸೇರಿಸಿ ನಮ್ಮ ಸೌಲಭ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಇದನ್ನು ಕೂಡಲೇ ಕೈಬಿಟ್ಟು ಹಿಂದಿನAತೆ ಪರಿಶಿಷ್ಟ ಪಂಗಡ ಯರವ ಸಮುದಾಯದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಹಾಗೂ ಯರವ ಸಮುದಾಯದ ಮುಖಂಡರೂ ಆದ ಪಿ.ಆರ್. ಪಂಕಜ ಮಾತನಾಡಿ, ನೈಜ ಬುಡಕಟ್ಟುಗಳಾದ ಯರವ ಜನಾಂಗವನ್ನು ಆದಿವಾಸಿ ಗುಂಪಿಗೆ ಸೇರಿಸ ಬೇಕು. ಕೊರಗ ಮತ್ತು ಜೇನು ಕರುಬ ಜನಾಂಗವನ್ನು ಆದಿವಾಸಿ ಗಳೆಂದು ಗುರುತಿಸಿ ಅವರಿಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮೂಲಕ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ. ಆದರೆ ಯರವ ಜನಾಂಗಕ್ಕೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಪೌಷ್ಟಿಕ ಆಹಾರವಾದ ಮೊಟ್ಟೆ ಇತರ ಸೌಲಭ್ಯಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ದೂರಿದರು. ಈ ರೀತಿ ತಾರತಮ್ಯವನ್ನು ಹೋಗಲಾಡಿಸಿ ನ್ಯಾಯ ಒದಗಿಸಿಕೊಡಬೇಕು. ಒಗ್ಗಟ್ಟಿನಿಂದ ಹೋರಾಟ ಮಾಡದಿದ್ದರೆ ನಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಸುನಿಲ್, ಯರವ ಜನಾಂಗದವರು ಕಾಫಿ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿರುವುದರಿಂದ ಅವರನ್ನು ಅಲೆಮಾರಿಗಳ ಗುಂಪಿಗೆ ಸೇರಿಸಿರುವುದು ಸರಿಯಲ್ಲ. ತಪ್ಪು ಸರಕಾರ ಜಾಗವನ್ನು ಗುರುತಿಸಿ ಶಾಶ್ವತ ನೆಲೆ ಒದಗಿಸಿಕೊಡಬೇಕು. ಅಲೆಮಾರಿ ಎನ್ನುವ ಹಣೆಪಟ್ಟಿಯನ್ನು ತೆಗೆದುಹಾಕಿ ಮೂಲ ನಿವಾಸಿಗಳಾಗಿ ಗೌರವದಿಂದ ಬದುಕಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.